ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷನಿಗೆ ಪ್ರಧಾನ ಸ್ಥಾನವಿದೆ. ಈ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗೆ ತಾರತಮ್ಯದಿಂದ, ಅವಕಾಶಗಳಿಲ್ಲದೆ ಅವಜ್ಞೆಗೆ ಗುರಿಯಾಗುತ್ತಿರುವುದು ಒಂದು ದುರಂತವೇ ಸರಿ.
21ನೇ ಶತಮಾನದಲ್ಲಿ ಮಹಿಳೆಯು ಶಿಕ್ಷಣವನ್ನು ಪಡೆದು ಮೇಲ್ನೋಟಕ್ಕೆ ಸಮಾಜದ ಎಲ್ಲಾ ಹಕ್ಕು ಗೌರವಗಳಿಗೆ ಪಾತ್ರರಾಗಿರುವಂತೆ ಕಂಡರೂ, ಅನೇಕ ಪ್ರದೇಶಗಳಲ್ಲಿ, ವಿಶೇಷವಾಗಿ ಹಳ್ಳಿಗಾಡು, ಬಡತನದ ಪ್ರದೇಶಗಳಲ್ಲಿ ಸಮಾಜದ ತುಳಿತಕ್ಕೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.
ಪ್ರಾಚೀನ ಕಾಲದಿಂದಲೂ ಗಂಡು ಹೆಣ್ಣು ಎಂಬ ಭೇದಭಾವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕಂಡುಬರುವ ಅನಾರೋಗ್ಯಕರ ಮತ್ತು ಅವೈಜ್ಞಾನಿಕ ವಿಚಾರವಾಗಿದೆ. ಆಕೆ ಹುಟ್ಟಿನಿಂದಲೂ ಶೋಷಣೆಗೆ, ತುಳಿತಕ್ಕೆ ಒಳಗಾಗಿ ನರಳುತ್ತಿದ್ದಾಳೆ.
ಆಯಾ ಕಾಲದಲ್ಲಿ ಮಹಿಳೆಯರು ಅತ್ಯುನ್ನತವಾದ ಸ್ಥಾನವನ್ನು ಹೊಂದಿದ್ದರು. ಹಾಗೆಯೇ ಕುಟುಂಬದಲ್ಲಿಯೂ ಅವರಿಗೆ ಮುಖ್ಯವಾದ ಸ್ಥಾನವನ್ನು ಒದಗಿಸಲಾಗಿತ್ತು. ಪುರುಷರಂತೆ ಮಹಿಳೆಯರು ಸಹ ಯಜ್ಞಯಾಗಾದಿಗಳಲ್ಲಿ ಪಾಲ್ಗೊಳ್ಳಬಹುದಾಗಿತ್ತು. ಕಾಲಕ್ರಮೇಣ ಸಾಮಾಜಿಕ ಪಿಡುಗುಗಳು ಹೆಚ್ಚಾದಂತೆ ಅಲ್ಲದೆ ಸಾಂಪ್ರದಾಯಿಕ ಜೀವನ ವ್ಯವಸ್ಥೆಯಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಮೌಢ್ಯಭಾವನೆ ಬೆಳೆಯತೊಡಗಿತು.
ಕಳೆದ ಶತಮಾನದಿಂದ ಮಹಿಳೆಯರ ಸ್ಥಾನಮಾನವನ್ನು ಉತ್ತಮಪಡಿಸಲು ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಅನೇಕ ಸಂಘಗಳ ಸ್ಥಾಪನೆಯಾಯಿತು. ಇದರ ಫಲವಾಗಿ ಮಹಿಳೆಯರಲ್ಲಿ ತಮ್ಮ ಹಕ್ಕುಗಳನ್ನು ಗುರುತಿಸಿಕೊಳ್ಳಲು ಸಹಾಯವಾಯಿತು. ಹೀಗಾಗಿ ಇಂದು ಸ್ತ್ರೀಯರು ಕ್ರೀಡೆ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ ಅಂತರಿಕ್ಷ ಮೊದಲಾದಠ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಇಂದು ಅಪಾರ ಸಾಧನೆಗೈದಿದ್ದಾರೆ.
ಮೊಟ್ಟ ಮೊದಲು ಮಹಿಳೆಯು ವಿದ್ಯಾವಂತಳಾಗಬೇಕು. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಅವಳಿಗೆ ಅರಿವು ಇರಬೇಕು. ಮ್ಯಾಕ್ಐವರ್ ಹೀಗೆ ಹೇಳುತ್ತಾನೆ, “ಒಂದು ವೇಳೆ ನೀವು ಒಬ್ಬ ಪುರುಷನನ್ನು ವಿದ್ಯಾವಂತನನ್ನಾಗಿ ಮಾಡಿದರೆ ಕೇವಲ ಒಬ್ಬನನ್ನು ಶಿಕ್ಷಕರನ್ನಾಗಿ ಮಾಡಿದೆವೆಂದು ತಿಳಿದುಕೊಳ್ಳಿ. ಒಂದು ವೇಳೆ ನೀವು ಒಬ್ಬ ಮಹಿಳೆಯನ್ನು ವಿದ್ಯಾವಂತಳನ್ನಾಗಿ ಮಾಡಿದರೆ ಇಡೀ ಕುಟುಂಬವನ್ನೇ ಶಿಕ್ಷಕರನ್ನಾಗಿ ಮಾಡಿದಂತೆ.” ವಿದ್ಯಾವಂತಳಾದ ಹೆಣ್ಣು ತಾನು ಪಡೆದ ಶಿಕ್ಷಣವನ್ನು ದೇಶದೆಲ್ಲೆಡೆ ಹರಡುವಲ್ಲಿ ಸಹಾಯಕಳಾಗಬಲ್ಲಳು. ತಾಯಿಯೇ ಮೊದಲ ಗುರು ಎಂಬಂತೆ ತಾನು ಕಲಿತ ವಿದ್ಯೆಯನ್ನು ಇತರರಿಗೂ ಕಲಿಸುವಲ್ಲಿ ಸಂತೋಷವನ್ನು ಕಾಣುತ್ತಾಳೆ.
ಈಗ ಮಹಿಳೆಯರ ಮೇಲಾಗುವ ಶೋಷಣೆಗಳನ್ನು ತಡೆಗಟ್ಟಲು ಅನೇಕ ಮಹಿಳಾ ಸಂಘಟನೆಗಳು ಸ್ತ್ರೀಶಕ್ತಿ, ಸೇವಾ ಸಂಘಗಳು ಸ್ಥಾಪಿತವಾಗಿ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಸಹಾಯವಾಗಿವೆ. ಈ ಸಂಘಟನೆಗಳು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಂತೆ ಸಮಾನ ಅವಕಾಶ ಕಲ್ಪಿಸಿದಾಗ ಮಾತ್ರ ನಾವು ಯೋಗ್ಯ ಸಮಾಜ ವ್ಯವಸ್ಥೆಯನ್ನು ಹೊಂದಲು ಸಾಧ್ಯ. ಮಹಿಳೆಯರನ್ನು ಕಡೆಗಣಿಸಿದರೆ ದೇಶಕ್ಕೆ ಅವರಿಂದ ಆಗುವ ಸೇವೆಯನ್ನು ಕಡೆಗಣಿಸಿದಂತಾಗುತ್ತದೆ. ಇದರಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯವಾಗುತ್ತದೆ. ಮಹಿಳೆಯರು ಯಾವುದೇ ರೀತಿಯಲ್ಲಿಯೂ ಪುರುಷರಿಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿಲ್ಲ.
ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲಿಯೂ ಮಹಿಳಾಮಣಿಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ, ಪುರುಷರಷ್ಟೇ ಸಮರ್ಥರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೊಲಗಳಲ್ಲಿ, ಗಣಿಗಳಲ್ಲಿ, ಕಾರ್ಖಾನೆಗಳಲ್ಲಿ, ಗಿರಣಿಗಳಲ್ಲಿ, ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರ್, ಡಾಕ್ಟರ್, ಪೈಲಟ್, ಶಿಕ್ಷಕಿ ಮತ್ತು ಪೊಲೀಸ್ ಅಧಿಕಾರಿಗಳಾಗಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಈಗ ರಾಜಕೀಯ ಕ್ಷೇತ್ರದಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ಕೊಡುಗೆ ಪ್ರಶಂಸನೀಯವಾಗಿದೆ. ಹೀಗಾಗಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಾದರೂ ದಕ್ಷ ಆಡಳಿತವನ್ನು ನಿರ್ವಹಿಸಿ ಸಮಾಜವನ್ನು ರೂಪಿಸುವುದರಲ್ಲಿ ಸಂದೇಹವಿಲ್ಲ.
ಯತೃ ನಾರ್ಯಸ್ತು
ಪೂಜ್ಯಂತೇ ರಮಂತೇ ತತೃ ದೇವತಾಃ
ಲೇಖನ-
ಶೋಭಾ. ಎಸ್
ಸಹ ಶಿಕ್ಷಕರು, ಮಾತೃ ಮಂಡಲಿ ಪ್ರೌಢಶಾಲೆ.ವಿವಿ ಮೊಹಲ್ಲಾ ಮೈಸೂರು.
