ಮೈಸೂರು: ಅಂಬಾರಿ ಆನೆ ಆಯ್ಕೆ ಕುರಿತು ತಮಗೆ ಮಾಹಿತಿ ನೀಡಿಲ್ಲ ಎಂಬ ರಾಜಮಾತೆ ಪ್ರಮೋದಾದೇವಿ ಒಡೆಯರ್ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಫ್ ಪ್ರಭುಗೌಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಅಂಬಾರಿ ಆನೆ ಆಯ್ಕೆ ಬಗ್ಗೆ ರಾಜಮನೆತನಕ್ಕೆ ಲಿಖಿತವಾಗಿ ಅಥವಾ ಔಪಚಾರಿಕವಾಗಿ, ಅಧಿಕೃತವಾಗಿ ಹೇಳುವ ಪದ್ಧತಿ ಇಲಾಖೆಯಲ್ಲಿ ಇಲ್ಲ. ಆದರೂ ಸಮನ್ವಯದ ದೃಷ್ಟಿಯಿಂದ ಅಕ್ಟೋಬರ್ 11 ಮತ್ತು 12 ರಂದು ದೂರವಾಣಿ ಮೂಲಕ ಅಗತ್ಯ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅ. 12 ರಂದು ಸಂಜೆ 5.44ಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ದೂರವಾಣಿ ಮೂಲಕ ಅಂಬಾರಿ ಆನೆ ಆಯ್ಕೆ ಬಗ್ಗೆ ವಿವರಿಸಲಾಗಿದೆ. ಅ.13 ರಂದು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಮಹೇಂದ್ರ ಆನೆ ಆಯ್ಕೆ ವಿಚಾರದಲ್ಲಿ ಏನೇನು ನಡೆಯಿತು, ಯಾಕೆ ಮಹೇಂದ್ರ ಆನೆ ಆಯ್ಕೆಯಾಗಲಿಲ್ಲ, ಪ್ರಶಾಂತ್ ಆನೆ ಆಯ್ಕೆಗೆ ಯಾವೆಲ್ಲ ಮಾನದಂಡಗಳನ್ನು ಪರಿಗಣಿಸಲಾಗಿದೆ ಎಂಬ ಬಗ್ಗೆ ಸುದೀರ್ಘವಾಗಿ ಪತ್ರ ಬರೆದು ಡಿಸಿಎಫ್ ಪ್ರಭುಗೌಡ ಸ್ಪಷ್ಟಪಡಿಸಿದ್ದಾರೆ.
