ಮೈಸೂರು: ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಕ್ಷೇಪಗಳಿಗೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸುಧೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಅರಮನೆಯ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆ ಯಾವುದೇ ಅಡ್ಡಿಪಡಿಸಿಲ್ಲ. ಅಗತ್ಯವಿದ್ದ ಕಡೆಗಳಲ್ಲಿ ಮಾತ್ರ ಬ್ಯಾರಿಕೇಡ್ ಅಳವಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ವಿದೇಶಿ ರಾಯಭಾರಿಗಳು, ನ್ಯಾಯಾಧೀಶರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಿದ್ದರು. ಅವರಿಗೆ ಸೂಕ್ತ ಭದ್ರತೆ ಒದಗಿಸಿ, ಕಾಲ್ತುಳಿತದಂತಹ ಅಹಿತಕರ ಘಟನೆಗಳನ್ನು ತಡೆದಿದ್ದೇವೆ. ಧಾರ್ಮಿಕ ಚಟುವಟಿಕೆ ಸುಗಮವಾಗಿ ನಡೆಯುವಂತೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸಮನ್ವಯ ಸಭೆಗಳನ್ನು ಮಾಡಲಾಗಿತ್ತು. ಅರಮನೆ ಆಡಳಿತ ಮಂಡಳಿ ಜೊತೆ ಸಭೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಜಟ್ಟಿ ಕಾಳಗದಲ್ಲಿ ಪೊಲೀಸರ ತಪ್ಪಿಲ್ಲ. ಮೂರು ತಂಡಗಳು ನಿಗದಿತ ಸಮಯಕ್ಕೆ ಬಂದಿದ್ದವು. ನಾಲ್ಕನೇ ತಂಡ ತಡವಾಗಿ ಬಂದಿತ್ತು. ಜೊತೆಗೆ ಅನಧಿಕೃತ ಪಾಸ್ ಇಲ್ಲದವರನ್ನು ಕರೆದುಕೊಂಡು ಬಂದಿದ್ದರು ಎಂದು ವಿವರಿಸಿದ್ದಾರೆ.
ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅವಕಾಶ ನೀಡಿರಲಿಲ್ಲ. ಅಧಿಕಾರಿಗಳ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಿರಲಿಲ್ಲ. ಹೊಸ ಆನೆ ನಿಯೋಜನೆಗೊಂಡ ಕಾರಣ ಪಾಸ್ ಹೊಂದಿದ್ದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಂಬಾರಿ ಸ್ವೀಕರಿಸುವಾಗ ಮತ್ತು ವಾಪಸ್ ಕೊಡುವಾಗ ಸುರಕ್ಷತೆ ಕಾಪಾಡಲಾಗಿದೆ. ಅರಮನೆ ಪ್ರತಿನಿಧಿಗಳ ಉಪಸ್ಥಿತಿಗೆ ಅವಕಾಶ ನೀಡಲಾಗಿತ್ತು. ಅಧಿಕೃತ ಪಾಸ್ ಇದ್ದವರಿಗೆ ಅಂಬಾರಿ ಕಟ್ಟುವಾಗ ಮತ್ತು ವಾಪಸ್ ಕೊಡುವಾಗ ಮುಕ್ತ ಅವಕಾಶ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕುಟುಂಬದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಭದ್ರತೆ ಒದಗಿಸಲಾಗಿದ್ದು, ಬ್ರಹ್ಮಪುರಿ ಗೇಟ್ ಬಳಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರು ಪ್ರತ್ಯುತ್ತರ ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ.
