ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಮಹಿಳೆಯ ಮೇಲೆ ಕೀಚಕರು ಸಾಮೂಹಿಕ ಅತ್ಯಾಚಾರ ಎಸಗಿದ ಅತ್ಯಂತ ಹೇಯ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಯಲೋದಹಳ್ಳಿ ಗ್ರಾಮದಲ್ಲಿ ಜೂನ್ 3 ರಂದು ಈ ಕ್ರೂರ ಘಟನೆ ನಡೆದಿದೆ.
ಜೂನ್ 8 ರಂದು ವಿಡಿಯೋ ವೈರಲ್ ಆದ ನಂತರ ಕೃತ್ಯ ಬೆಳಕಿಗೆ ಬಂದಿದೆ.
ಜೂ.3ರಂದು 40 ವರ್ಷದ ಮಹಿಳೆ ಪತಿಯೊಂದಿಗೆ ಜಗಳವಾಡಿ ತಾಯಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಹೀಗೆ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಗೆ ಇಬ್ಬರು ಯುವಕರು ಸಹಾಯ ಮಾಡುವ ನೆಪದಲ್ಲಿ ಬಂದು,ನಿಂತ್ಕೊಳಿ,ಒಬ್ಬರೆ ಹೋಗ್ತಾ ಇದೀರಾ ಸುಸ್ತಾಗಿದೀರಾ ಕೂಲ್ ಡ್ರಿಂಕ್ಸ್ ಕುಡಿಯಿರಿ ಅಂತ ಕೊಟ್ಟಿದ್ದಾರೆ.
ಕೂಲ್ ಡ್ರಿಂಕ್ಸ್ ನಲ್ಲಿ ಅಮಲು ಬರುವ ವಸ್ತು ಬೆರೆಸಿದ್ದಾರೆ. ಅಮಾಯಕ ಮಹಳಿ ಅದನ್ನು ಕುಡಿದಿದ್ದಾರೆ.
ಆಕೆ ಪ್ರಜ್ಞೆ ತಪ್ಪಿದ ಬಳಿಕ ಗ್ರಾಮದ ಹೊರವಲಯದ ನಿರ್ಜನ ತೋಟಕ್ಕೆ ಕರೆದೊಯ್ದು10 ಮಂದಿ ಪಾಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆರೋಪಿಗಳು ವಿಡಿಯೋ ಮಾಡಿ ವಾಟ್ಸಾಪ್ ಗುಂಪುಗಳಲ್ಲಿ ಇದನ್ನೆಲ್ಲ ಶೇರ್ ಮಾಡಿದ್ದರು. ಪ್ರಕರಣ ದಾಖಲಾಗಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಒಬ್ಬ ಅಪ್ರಾಪ್ತ ಸೇರಿ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ.
ಇಸ್ತ್ರೀ ನಾಗರಾಜ, ಅರ್ಜುನ, ಬಸವಂತ, ಕುಂದೂರ ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನಿಲ್, ಪ್ರದೀಪ್, ಮಧು ಮತ್ತು ಚಟಾಕಿ ನಾಗರಾಜ ಬಂಧಿತರು.
ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಹೇಯ ಘಟನೆ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು,ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
