ಮೈಸೂರು: ಪತ್ನಿಯ ಮೇಲೆ ಅನುಮಾನಪಟ್ಟು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ.
ಇಲವಾಲ ಹೋಬಳಿ,ಬೊಮ್ಮೇನಹಳ್ಳಿ ಗ್ರಾಮದ ಕಿರಣ್ ಕುಮಾರ್(27)
ಪ್ರಕರಣದ ಆರೋಪಿ ಕಿರಣ್ ಕುಮಾರ್.
ಆರೋಪಿ ಮತ್ತು ಮೃತ ಪ್ರೀತುಕುಮಾರಿ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಪ್ರೀತುಕುಮಾರಿ 9 ವರ್ಷಗಳ ಹಿಂದೆ ಸ್ಲಾಮಿ ಎಂಬುವವರ ಜೊತೆ ಮದುವೆಯಾದಳು.
ನಂತರ 3 ಜನ ಮಕ್ಕಳನ್ನು ಕರೆದುಕೊಂಡು ಬಂದು ಬೆಳವಾಡಿಯಲ್ಲಿ ಆರೋಪಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ವೇಳೆ ಆರೋಪಿಯು ಆಕೆಯ ನಡವಳಿಕೆ ಮೇಲೆ ಅನುಮಾನಪಟ್ಟು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಇದರಿಂದ ಆಕೆ ಆರೋಪಿಯನ್ನು ಬಿಟ್ಟು ಹೋಗುವುದಾಗಿ ಹೇಳಿದ್ದಳು, ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ ಒಂದು ಕಬ್ಬಿಣದ ಮಚ್ಚನ್ನು ಅಡುಗೆ ಮನೆಯಲ್ಲಿ ಇಟ್ಟುಕೊಂಡು,15-04-2021 ರಂದು ಮಚ್ಚಿನಿಂದ ಆಕೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಆಕೆಯನ್ನು ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವನ್ನು ಮೈಸೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ವಿಚಾರಣೆಗೆ ಒಳಪಡಿಸಿ ಸರ್ಕಾರಿ ಅಭಿಯೋಜಕರಾದ ಬಿ.ಎಂ.ವೀಣಾ ರವರು ವಾದ ಮಂಡಿಸಿದ್ದರು.
ನ್ಯಾಯಾಧೀಶರಾದ ಮೋಹನ್ ಬಸಪ್ಪ ಬಡಗಂಡಿ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿತನಿಗೆ ಜೀವಾವಧಿ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
