ಮೈಸೂರು: ಕುವೆಂಪು ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ದಸರಾ ಯುವ ಸಂಭ್ರಮದ 7ನೇ ದಿನದ ಕಾರ್ಯಕ್ರಮದಲ್ಲಿ ನೃತ್ಯರೂಪಕಗಳು ಮೇಳೈಸಿದವು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪೌರಾಣಿಕ, ಜಾನಪದ, ದೇಶಭಕ್ತಿ ಮತ್ತು ಸಾಮಾಜಿಕ ಸಂದೇಶಗಳನ್ನೊಳಗೊಂಡ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಸೂರೆಗೊಂಡರು.
ವಿದ್ಯಾರ್ಥಿಗಳು ಪೌರಾಣಿಕ ಕಥೆಗಳನ್ನು ಆಧರಿಸಿದ ನೃತ್ಯ, ಹಳೆಯ-ಹೊಸ ಗೀತೆಗಳ ಸಮ್ಮಿಲನ, ಕರ್ನಾಟಕದ ಸಾಂಸ್ಕೃತಿಕ ವೈಭವ, ಸಾಹಿತಿಗಳು ಮತ್ತು ಜ್ಞಾನಪೀಠ ಪುರಸ್ಕೃತರ ಜೀವನ ಚರಿತ್ರೆಯನ್ನು ಬಿಂಬಿಸುವ ಅಭಿನಯಗಳನ್ನು ಪ್ರದರ್ಶಿಸಿದರು.
ವೀರಗಾಸೆ, ಯಕ್ಷಗಾನ, ಕೋಲಾಟ, ಗಾರುಡಿ ಗೊಂಬೆ, ಕರಡಿ ಮಜಲು, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ ಮತ್ತು ಪಟದ ಕುಣಿತದಂತಹ ಜಾನಪದ ಕಲಾಪ್ರಕಾರಗಳು ಎಲ್ಲರನ್ನು ಆಕರ್ಷಿಸಿದವು.
ಇದಲ್ಲದೆ, ಭಾರತೀಯ ಸೇನೆಯಲ್ಲಿ ಮಹಿಳಾ ಯೋಧರ ಶೌರ್ಯ, ರೈತರ ಬದುಕು, ರಾಸಾಯನಿಕ ಬಳಕೆ ತಗ್ಗಿಸುವ ಅಗತ್ಯ, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಮತ್ತು ಅಂಗವೈಕಲ್ಯವನ್ನು ಮೆಟ್ಟಿ ನಿಂತ ಸಾಧಕರ ಕಥೆಗಳನ್ನು ಆಧರಿಸಿದ ರೂಪಕಗಳು ಅರ್ಥಬದ್ಧವಾಗಿದ್ದವು.
ಮಾದರಿ ಕರ್ನಾಟಕ ನಿರ್ಮಾಣದಲ್ಲಿ ಮೈಸೂರು ಮಹಾರಾಜರ ಕೊಡುಗೆಗಳನ್ನು ಸಾರುವ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಯುವ ಸಂಭ್ರಮ ಉಪಸಮಿತಿ ಅಧ್ಯಕ್ಷ ಡಾ. ರಾಕೇಶ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
