(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮದ್ಯಪಾನ ಮಾಡಲು ಹಣ ಕೊಡಲು ನಿರಾಕರಿಸಿದ ಹೆಂಡತಿಯನ್ನು ದೊಣ್ಣೆಯಿಂದ ಬಡಿದು ಕೈ ಮುರಿದು ಕೊಲೆ ಮಾಡಿದ ಆರೋಪಿ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಹನೂರು ತಾಲೂಕಿನ ಬಿದರಹಳ್ಳಿ ಗ್ರಾಮದ ಅಮಲ್ ರಾಜ್ ಎಂಬಾತ ತನ್ನ ಹಂಡತಿ ಶೋಭಾಳನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಆರೋಪಿ ಅಮಲ್ ದಾಸ್ ಬಿಡದಿಯಲ್ಲಿ ಕೆಲಸ ಮಾಡುತ್ತಿದ್ದಾಗ ಶೋಭಾ ಅವರ ಜೊತೆ ಪ್ರೀತಿ ಉಂಟಾಗಿ ಬಿದರಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದ.
ತೋಟದ ಮನೆಯಲ್ಲಿ ಗಂಡ ಹೆಂಡತಿಯರು ವಾಸ ಮಾಡುತ್ತಿದ್ದರು.ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
23/12/2024 ರಂದು ಹೆಂಡತಿ ಶೋಭಳನ್ನು ಮದ್ಯಪಾನ ಮಾಡಲು ಹಣ ಕೇಳಿದಕ್ಕೆ ಹಣ ಇಲ್ಲ ಎಂದು ಹೇಳಿದ್ದಾಳೆ,ಆಗ ಅಮಲ್ ಶೋಭಳನ್ನು ಮನೆಯೊಳಗೆ ಎಳೆದು ತಂದು ಬಾಗಿಲು ಹಾಕಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ,ಆದರೂ ತಪ್ಪಿಸಿಕೊಂಡು ಶಿವು ಎಂಬುವವರ ಜಮೀನಿನ ಕಡೆ ಓಡುತ್ತಿದ್ದವಳನ್ನು ಮತ್ತೆ ಹಿಡಿದು ದೊಣ್ಣೆಯಿಂದ ಹಲ್ಲೆ ಮಾಡಿ ಎಡಗೈ ಮುರಿದು ಕತ್ತು ಹಿಸುಕಿ ಮನಬಂದಂತೆ ಹೊಡೆದು ಕೊಲೆ ಮಾಡಿದ್ದ.
ಕ್ರೈಸ್ತ ಜನಾಂಗದವರಾದ ಈ ದಂಪತಿ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡು ಖುಷಿ ಪಡಬೇಕಾಗಿದ್ದ ವೇಳೆ ಶೋಭಾ ಕೊಲೆಯಾಗಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕದ ಜಮೀನಿನ ಮಾಲಿಕ ಶಿವು ಅವರು ಅಮಲ್ ರಾಜ್ ಪ್ರತಿದಿನ ಕುಡಿದು ಬಂದು ಶೋಭಾರಿಗೆ ಕಿರುಕುಳ ನೀಡುತ್ತಿದ್ದ. ಒಮ್ಮೆ ತಲೆಗೆ ಹೊಡೆದು ಗಾಯಗೊಳಿಸಿದ್ದ. ಇನ್ನೊಮ್ಮೆ ಕಾಲು ಕತ್ತರಿಸಲು ಸಹ ಮುಂದಾಗಿದ್ದ. ಈ ವೇಳೆ ನಾನೇ 112 ಸಂಖ್ಯೆ ವಾಹನಕ್ಕೆ ಕರೆ ಮಾಡಿ ದೂರು ನೀಡಿದ್ದೆ. ಪೊಲೀಸರು ಹಲವಾರು ಬಾರಿ ಬುದ್ಧಿವಾದ ಹೇಳಿದ್ದರು ಆದರೂ ವರ್ತನೆ ಬದಲಾಯಿಸಿಕೊಳ್ಳದೆ ಕುಡಿದ ಅಮಲಿನಲ್ಲಿ ಶೋಭಾರನ್ನು ಅಮಲ್ ರಾಜ್ ಕೊಲೆ ಮಾಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಹನೂರು ತಾಲ್ಲೂಕು ರಾಮಾಪುರ ಠಾಣೆಯ ಪೊಲೀಸರು ಕೊಲೆಯಾಗಿರಬೇಕೆಂದು ಅನುಮಾನಿಸಿದ್ದರು.
ಆರಕ್ಷಕ ನಿರೀಕ್ಷಕ ಪಿ.ಎನ್. ಶೇಷಾದ್ರಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಅಮಲ್ ರಾಜ್ ಪತ್ನಿ ಶೋಭಾ ಳನ್ನು ಕೊಲೆ ಮಾಡಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಕೊಲೆ ಆರೋಪಿಗೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಸಿ ಶ್ರೀಕಾಂತ್ ಅವರು 10 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿ.ಜಿ ಗಿರೀಶ್ ಅವರು ವಾದ ಮಂಡಿಸಿದ್ದರು.
