ಮೈಸೂರು: ಅಂತರರಾಜ್ಯ ಮಹಿಳಾ ಆರೋಪಿಗಳು ಸೇರಿದಂತೆ ಒಟ್ಟು ಮೂರು ಜನರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು 16,50,000 ರೂ ಬೆಲೆ ಬಾಳುವ ಸುಮಾರು 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
24-1-2026 ರಂದು ಮೈಸೂರು ನಗರದ ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್-10 ರಲ್ಲಿ ಮಹಿಳೆಗೆ ಸೇರಿದ ಸುಮಾರು 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳವಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ಮತ್ತು ಮಾಲು ಪತ್ತೆಗಾಗಿ ನಗರ ಪೊಲೀಸ್ ಆಯುಕ್ತರು ವಿಶೇಷ ತಂಡ ರಚನೆ ಮಾಡಿದ್ದರು.
ಅದರಂತೆ ವಿಶೇಷ ತಂಡದ ಸಿಬ್ಬಂದಿ ತಮಿಳನಾಡು ರಾಜ್ಯದ ಆರೋಪಿಗಳಾದ ಪಂಜವರ್ಣಮ್, ಸುಮದಿ, ರಘು ಎಂಬ ಆರೋಪಿಗಳನ್ನು ಬಂಧಿಸಿ, 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಠಾಣೆಯ ಇತರೆ ಎರಡು ಪ್ರಕ.ರಣಗಳಿಗೆ ಸಂಬಂಧಿಸಿದ 22 ಗ್ರಾಂ ಚಿನ್ನದ ನಕ್ಲೇಸ್ ಹಾಗೂ 56 ಗ್ರಾಂ ತೂಕದ ಚಿನ್ನದ ಆಭರಣಗಳು ಸೇರಿದಂತೆ ಒಟ್ಟು 3 ಕಳವು ಪ್ರಕರಣಗಳನ್ನು ಪತ್ತೆಮಾಡಿ 16,50,000 ರೂ ಬೆಲೆ ಬಾಳುವ ಒಟ್ಟು 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಉಪ ಪೊಲೀಸ್ ಆಯುಕ್ತ (ಸಂಚಾರ)
ಸುಂದರರಾಜ್ ಅವರ ಮಾರ್ಗದರ್ಶನಲ್ಲಿ, ದೇವರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆ.ರಾಜೇಂದ್ರ ಅವರ ಉಸ್ತುವಾರಿಯಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲೋಲಾಕ್ಷಿ ಟಿ.ಎಸ್, ಪೊಲೀಸ್ ಉಪನಿರೀಕ್ಷಕರಾದ ರಾಧಾ ಎಂ ಮತ್ತು ರಂಗಸ್ವಾಮಿ ಎನ್.ವಿ ಸಿಬ್ಬಂದಿಗಳಾದ ಸುರೇಶ, ರವಿಕುಮಾರ, ಮಂಜುನಾಥ, ಚೌಡಪ್ಪ ಪಾಸೀಗರ್, ಅಬ್ದುಲ್ ರೆಹಮಾನ್, ಅಶ್ವಿನಿ ಹೆಳವರ್ ಹಾಗೂ ಸೆಲ್ನ ಕುಮಾರ್ ಅವರುಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಪತ್ತೆ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಶ್ಲಾಘಿಸಿ ಪ್ರಶಂಶಿಸಿದ್ದಾರೆ.
