(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮದ್ದೂರಿನಿಂದ ಕೆ.ಎಂ ದೊಡ್ಡಿಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕೊಳ್ಳೇಗಾಲ ಘಟಕದ ಕೆ ಎಸ್.ಆರ್.ಟಿ.ಸಿ ಬಸ್ ನಲ್ಲಿ ಕಳೆದುಕೊಂಡಿದ್ದ ಚಿನ್ನದ ಒಡವೆ ಇದ್ದ ಬ್ಯಾಗನ್ನು ಬಸ್ನ ಚಾಲಕ ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಏ.8 ರಂದು ನಿನ್ನೆ ರಾತ್ರಿ ಸುಮಾರು 10ಘಂಟೆ ಸಮಯದಲ್ಲಿ ಕೊಳ್ಳೇಗಾಲ ಘಟಕಕ್ಕೆ ಸೇರಿದ ವಾಹನ ಸಂಖ್ಯೆ KA 45 F-0042 ಬಸ್ಸು (ಮಾರ್ಗ ಸಂಖ್ಯೆ 81) ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿತ್ತು.
ಇದೇ ಬಸ್ನಲ್ಲಿ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಹೋಬಳಿ ಗುಡಿಗೆರೆ ಗ್ರಾಮದ ಸಿಂಧು ಜಿ ಎಸ್ ಎಂಬ ಮಹಿಳೆ ಮದ್ದೂರಿನಿಂದ ಕೆ ಎಂ ದೊಡ್ಡಿ ಗೆ ಪ್ರಯಾಣಿಸುತಿದ್ದರು. ಕೆ ಎಮ್ ದೊಡ್ಡಿಯಲ್ಲಿ ಇಳಿಯುವ ವೇಳೆ ಸಿಂಧು ಅವರು ಬಸ್ನಲ್ಲಿ ತಮ್ಮ ಬ್ಯಾಗ್ ಬಿಟ್ಟು ಹೋಗಿದ್ದರು.
ಬ್ಯಾಗ್ ನಲ್ಲಿ ಸುಮಾರು 8 ಗ್ರಾಂ ಚಿನ್ನದ ಒಡವೆ, ಬಟ್ಟೆ ಹಾಗೂ ಆಧಾರ್ ಕಾರ್ಡ್ ಇತ್ತು.
ಬಸ್ಸಿನ ಚಾಲಕ ಕಂ ನಿರ್ವಾಹಕ ವೆಂಕಟಾಚಲ ಅವರು ಪ್ರಯಾಣಿಕರು ಬಸ್ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಘಟಕದ ಭದ್ರತಾ ಶಾಖೆಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಂದು ಬೆಳಿಗ್ಗೆ 9.30 ರಲ್ಲಿ ಬ್ಯಾಗ್ ಕಳೆದು ಕೊಂಡಿದ್ದ ಪ್ರಯಾಣಿಕರಾದ ಸಿಂಧು ಜಿ.ಎಸ್ ಅವರಿಗೆ ಅವರ ವಿಳಾಸದ ಮಾಹಿತಿ ಪಡೆದು ಪ್ರಯಾಣಿಸಿದ ಟಿಕೆಟ್, ಹಾಗೂ ಅವರ ಆಧಾರ್ ಕಾರ್ಡ್ ನಕಲು ಪ್ರತಿ ಯನ್ನು ಪಡೆದು ಘಟಕ ವ್ಯವಸ್ಥಾಪಕರದ ಭೋಗನಾಯಕ್ ಹಾಗೂ ಭದ್ರತಾ ಸಿಬ್ಬಂದಿ ಧರಣೀಶ್ ಅವರ ಸಮ್ಮುಖದಲ್ಲಿ ಆಭರಣ ಇದ್ದ ಬ್ಯಾಗ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪಾರುಪತ್ತೇದಾರ ಪರಮೇಶ್ವರ್, ಕುಶಲಕರ್ಮಿ ಚಂದ್ರ ಶೇಖರ್ ಪಿ, ಚಾಲಕ ವೆಂಕಟಾಚಲ ಹಾಗೂ ಬ್ಯಾಗ್ ಕಳೆದು ಕೊಂಡಿದ್ದ ದಂಪತಿ ಹಾಜರಿದ್ದರು.
