ಹುಣಸೂರು: ಡಾ.ಬಿ.ಆರ್.ಅಂಬೇಡ್ಕರ್
ಭವನದಲ್ಲಿ ಅಂಬೇಡ್ಕರ್ ಅವರ ಜಯಂತಿ ಪೂರ್ವಭಾವಿ ಸಭೆ ನಡೆಯುತ್ತಿದ್ದಾಗ ಏಕಾಏಕಿ ವ್ಯಕ್ತಿಯೊಬ್ಬರು ಬಾಬು ಜಗಜೀವನರಾಮ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು ಆ ವ್ಯಕ್ತಿಯ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಮಾದಿಗ ಹೋರಾಟ ಸಮಿತಿ ಒತ್ತಾಯಿಸಿದೆ.
ಇಂದು ತಾಲೂಕು ಆಡಳಿತ ಸೌಧದ ಮುಂದೆ
ಮಾದಿಗ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಸಭೆಯಲ್ಲಿ ರಾಷ್ಟ್ರ ನಾಯಕ ಬಾಬು ಜಗಜೀವನ್ ರಾಮ್ ಅವರಿಗೆ ಅಪಮಸನ ಮಾಡಿದ ವ್ಯಕ್ತಿ ನಾಗರಾಜ್ ಮೇಲೆ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬೆಳ್ತೂರು,ಪರಶುರಾಮ್ ಮತ್ತಿತರರು ಆಗ್ರಹಿಸಿದರು.
ಏ.7 ರಂದು ಮಧ್ಯಾಹ್ನ 12.30 ಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿಗಳೂ ಆದ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ, ಹಳೇಬೀಡು ಗ್ರಾಮದ ನಾಗರಾಜು ಎಂಬ ವ್ಯಕ್ತಿ ಏಕಾಏಕಿ ಅಂಬೇಡ್ಕರ್ ಭವನದಲ್ಲಿ ಹಾಕಿರುವ ಬಾಬು ಜಗಜೀವನರಾಮ್ ಅವರ ಫೋಟೋವನ್ನು ಕಿತ್ತು ಬಿಸಾಕಿ,ಆ ಫೋಟೋ ಅಲ್ಲಿ ಹಾಕಬೇಡಿ ಎಂದು ಉದ್ದಟತನದಿಂದ ನಡೆದುಕೊಂಡು ರಾಷ್ಟ್ರ ನಾಯಕರಿಗೆ ಅಪಮಾನ ಮಾಡಿದ್ದಾರೆ.
ಏರುಧ್ವನಿಯಲ್ಲಿ ಕೂಗಾಡಿ ಸಭೆಯಲ್ಲಿ ರಾಷ್ಟ್ರನಾಯಕರಿಗೆ ತಹಸೀಲ್ದಾರ್ ಅವರ ಸಮ್ಮುಖದಲೇ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಹಾಗೂ ದೇಶದ ಉಪಪ್ರಧಾನಿಗಳಾದ ಡಾ. ಬಾಬು ಜಗಜೀವನರಾಮ್ ಅವರ ಬಗ್ಗೆ, ನಾಗರಾಜು ಅವರು ಅವಹೇಳನ ಮಾಡಿ ಮಾತನಾಡಿರುವುದು ಜಾತಿ ಜಾತಿಗಳ ನಡುವೆ ಅಶಾಂತಿ ಉಂಟುಮಾಡಿ ರಾಷ್ಟ್ರನಾಯಕರಿಗೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ, ಈತನ ಮೇಲೆ ಗೂಂಡಾ ಕಾಯ್ದೆ ಮತ್ತು ದೇಶದ್ರೋಹ ಕಾಯ್ದೆಯಡಿ ದೂರು ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾದಿಗ ಹೋರಾಟ ಸಮಿತಿಯ ಪದಾಧಿಕಾರಿಗಳು,ಬಾಬು ಅಭಿಮಾನಿಗಳು ಪಾಲ್ಗೊಂಡಿದ್ದರು.
