ಬೆಂಗಳೂರು: ಅಂತೂ ಇಂತೂ ಡಿ.ಕೆ.ಶಿವಕುಮಾರ್ ಅವರ ಕನಸು ಈಡೇರಿದೆ ,ದೇವರಿಗೆ ಅವರು ಹೊತ್ತಿದ್ದ ಪ್ರಾರ್ಥನೆ,ಹರಕೆ ಫಲ ನೀಡಿದ್ದು ಮುಖ್ಯ ಮಂತ್ರಿಯಾಗಿ ಬುಧವಾರ ಸಂಜೆ ಶುಭ ಲಗ್ನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಪಟಾಕಿ ಸಿಡಿತ,ಶಿಳ್ಳೆ ಹರ್ಷೋದ್ಗಾರಗಳ ನಡುವೆ, ಡಿ.ಕೆ. ಶಿವಕುಮಾರ್ ಅವರು ಸಂಜೆ 4.15 ಕ್ಕೆ ಲೋಕಭವನದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಡಿಕೆ ಪರ್ವ ಪ್ರಾರಂಭವಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು.
ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ ಅವರು, ಅಜ್ಜಯ್ಯ ಸ್ವಾಮೀಜಿಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಅವರು ತಮ್ಮ ಆಧ್ಯಾತ್ಮಿಕ ಗುರು ವೀರಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ವಲ್ಪ ಸಮಯದ ನಂತರ, ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಕೆ.ಎಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೋಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಭೈರತಿ ಸುರೇಶ್ ಮತ್ತು ಶರಣ ಪ್ರಕಾಶ್ ಪಾಟೀಲ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲ ಮತ್ತು ಕೆ.ಸಿ ವೇಣುಗೋಪಾಲ್,ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ,ಕೇರಳದ ಕಾಂಗ್ರೆಸ್ ಸಂಸದ ಆಂಟೋ ಆಂಟೊನಿ,
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ,ಸ್ಯಾಂಡಲ್ ವುಡ್ ನ ಜಯಮಾಲಾ ಮತ್ತು ಶಿವರಾಜ್ಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಸರ್ವಧರ್ಮದ ಧರ್ಮಗುರುಗಳು ಉಪಸ್ಥಿತರಿದ್ದು ನೂತನ ಮುಖ್ಯ ಮಂತ್ರಿಗೆ ಆಶೀರ್ವಚನ ನೀಡಿದರು.
ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವ ಮೊದಲು ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.
ಆ ನಂತರ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
