ಮೈಸೂರು: ಸಾಂಸ್ಕೃತಿಕ ನಗರಿ ಹಾಗೂ ಕನ್ನಡ ಭಾಷೆ, ಸಂಸ್ಕೃತಿಯ ಪ್ರಮುಖ ಕೇಂದ್ರವಾದ ಮೈಸೂರಿನಲ್ಲಿ ಕನ್ನಡ ಚಟುವಟಿಕೆಗಳ ಯಶಸ್ವಿ ನಿರ್ವಹಣೆಗೆ ಪೂರಕವಾಗಿ ತಕ್ಷಣ ಒಂದು ಸುಸಜ್ಜಿತ ‘ಕನ್ನಡ ಭವನ’ವನ್ನು ನಿರ್ಮಾಣ ಮಾಡಬೇಕು ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲೆಯು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಜಗತ್ಪ್ರಸಿದ್ಧಿಯಾಗಿದೆ. ಆದರೆ, ಜಿಲ್ಲೆಯ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಮತ್ತು ವಿವಿಧ ಸಂಘ-ಸಂಸ್ಥೆಗಳು ಸಭೆ-ಸಮಾರಂಭಗಳನ್ನು ನಡೆಸಲು ಹಾಗೂ ಗೋಷ್ಠಿಗಳನ್ನು ಆಯೋಜಿಸಲು ಸ್ವಂತದ್ದಾದ ಒಂದು ಸುಸಜ್ಜಿತ ಸಭಾಂಗಣ ಅಥವಾ ಭವನದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರದಿಂದ ಸೂಕ್ತ ಜಾಗವನ್ನು ( ಈಗಾಗಲೇ ಜಾಗವನ್ನು ಗುರುತಿಸಿ ಇದ್ದರೆ ಅದೆ ಜಾಗದಲ್ಲಿ ) ಹಾಗೂ ಅನುದಾನವನ್ನು ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೈಸೂರು ನಗರದ ಕೇಂದ್ರ ಭಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಉಚಿತ ನಿವೇಶನ ಹಾಗೂ ಅಗತ್ಯ ಹಣಕಾಸು ನೆರವನ್ನು ಸರ್ಕಾರ ಪ್ರಕಟಿಸಬೇಕು.
ಭವನದಲ್ಲಿ ಸುಸಜ್ಜಿತ ಸಭಾಂಗಣ, ಡಿಜಿಟಲ್ ಗ್ರಂಥಾಲಯ ಹಾಗೂ ಕನ್ನಡ ಹೋರಾಟಗಳ ಇತಿಹಾಸ ಸಾರುವ ಗ್ಯಾಲರಿ ಇರಬೇಕು.
ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತ್ಯಾಸಕ್ತರು ಸೃಜನಶೀಲ ಚಟುವಟಿಕೆಗಳನ್ನು ನಡೆಸಲು ಇದು ವೇದಿಕೆಯಾಗಬೇಕು.
ಕನ್ನಡ ನಾಡು-ನುಡಿಯ ರಕ್ಷಣೆಗೆ ಸದಾ ಮುಂಚೂಣಿಯಲ್ಲಿರುವ ಮೈಸೂರು ಜಿಲ್ಲೆಗೆ ಈ ಭವನ ಅತ್ಯಂತ ಅವಶ್ಯಕವಾಗಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಉಸ್ತುವಾರಿ ಸಚಿವರು ಈ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಅವರು ತಿಳಿಸಿದ್ದಾರೆ.
ಕೆಲವೇ ದಿನಗಳಲ್ಲಿ ಕನ್ನಡ ಕ್ರಾಂತಿದಳ ದ ನಿಯೋಗ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.
