ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಜಿಲ್ಲೆ ಹಾಗೂ ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಲಾ ನಡಿಗೆ ನಿಮ್ಮ ಕಡೆಗೆ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು.
ನಂಜನಗೂಡಿನ ಶ್ರೀಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಾ ನಡಿಗೆ ನಿಮ್ಮ ಕಡೆಗೆ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನೆರೆದಿದ್ದ ಭಕ್ತರು ಮತ್ತು ಸಾರ್ವಜನಿಕರು ವಿವಿಧ ಕಲಾ ಪ್ರಕಾರಗಳನ್ನು ವೀಕ್ಷಿಸಿ ಆನಂದಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಗಾಯಕರಾದ ಅಮ್ಮ ರಾಮಚಂದ್ರ ಮತ್ತು ತಂಡ ಭಕ್ತಿಗೀತೆ ಹಾಗೂ ಸುಗಮ ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮೈಸೂರು-ಚಾಮರಾಜನಗರ ಭಾಗದ ವಿಶೇಷ ಜಾನಪದ ಕಲೆ ಕಂಸಾಳೆ ಕಲೆಯನ್ನು ಕಲಾವಿದ ಪುಟ್ಟಮಾದನಾಯಕ ಮತ್ತು ತಂಡದವರು ಪ್ರಸ್ತುತಪಡಿಸಿದರು,ಅವರ ಕುಣಿತ ಮತ್ತು ಹಾಡು ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ. ಸುದರ್ಶನ ಅವರು ಮಾತನಾಡಿ ಕಲಾವಿದರನ್ನು ಶ್ಲಾಘಿಸಿದರು. ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂದು ಅವರು ಹೇಳಿದರು.
