ಕಾಸರಗೋಡು: ಕನ್ನಡ ಜಾನಪದ ಕಲಾ ಸಂಪತ್ತಿನ ಸಂರಕ್ಷಕ ಹಾಗೂ ಸಂಘಟನಾ ಸಾಮ್ರಾಟ್, ಕನ್ನಡ ಜಾನಪದ ಪರಿಷತ್ ಸಂಸ್ಥಾಪಕ ಡಾ. ಜಾನಪದ ಎಸ್. ಬಾಲಾಜಿ ಅವರು ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಾ.ಜಾನಪದ ಎಸ್ ಬಾಲಾಜಿ
ಅವರ ಜಾನಪದ ಮತ್ತು ಯುವಜನ ಸೇವಾ ಕ್ಷೇತ್ರದ ಅನನ್ಯ ಕೊಡುಗೆಗಳನ್ನು ಪರಿಗಣಿಸಿ, ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದಿಂದ ನೀಡಲಾಗುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026 ಅನ್ನು ಇಂದು ಗೌರವಪೂರ್ವಕವಾಗಿ ಪ್ರದಾನ ಮಾಡಲಾಯಿತು.
ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ, ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು (ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀಮದೆಡನೀರು) ಅವರ ಸಾನ್ನಿಧ್ಯದಲ್ಲಿ ಹಿರಿಯ ಐಎಎಸ್ ಅಧಿಕಾರಿ (ನಿ.), ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರಧಾನ ನಂತರ ಮಾತನಾಡಿದ ಡಾ. ಸಿ. ಸೋಮಶೇಖರ್ ಅವರು,ಡಾ. ಜಾನಪದ ಎಸ್. ಬಾಲಾಜಿ ಅವರು ಕಳೆದ 32 ವರ್ಷಗಳಿಂದ ಯುವಜನ ಮತ್ತು ಜಾನಪದ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ ಪಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಗೆ ಇಂದಿನ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸರ್ಕಾರ ಕೂಡಾ ಅನೇಕ ಪ್ರಶಸ್ತಿಗಳ ಮೂಲಕ ಅವರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪ್ರಕಾಶ್ ಮತ್ತಿಹಳ್ಳಿ (ಕಾರ್ಯದರ್ಶಿ, ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರ), ಡಾ. ಸುರೇಶ್ ನೆಲಗುಳಿ (ಸಾಹಿತಿ, ಶ್ರೇಷ್ಠ ಗಜಲ್ ಕವಿ), ಡಾ. ಎನ್. ವೆಂಕಟರಮಣ ಹೊಳ್ಳ (ಸಮ್ಮೇಳನ ಸಮಿತಿಯ ಅಧ್ಯಕ್ಷರು), ಬಿ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
