ಕೊಳ್ಳೇಗಾಲ,ಆ.1: ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ ಕಾವೇರಿ ನೀರನ್ನು ಹರಿಸು ವಂತೆ ಸಿ.ಡಬ್ಲ್ಯೂ.ಆರ್.ಸಿ ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೊಳ್ಳೇಗಾಲ ತಾಲ್ಲೂಕು ಘಟಕದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲ್ಲೂಕು ಅಧ್ಯಕ್ಷ ಮೆಹಬೂಬ್ ಪಾಷ ನೇತೃತ್ವದಲ್ಲಿ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಕಾವೇರಿ ಜಲ ನಿಯಂತ್ರಣ ಸಮಿತಿ ವಿರುದ್ಧ ಘೋಷಣೆ ಕೂಗುತ್ತಾ ತಾಲೂಕು ಕಚೇರಿ ತಲುಪಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಮೆಹಬೂಬ್ ಪಾಷ ಕಾವೇರಿ ಜಲ ನಿಯಂತ್ರಣ ಸಮಿತಿ, ತಮಿಳುನಾಡು ರಾಜ್ಯಕ್ಕೆ ನಿತ್ಯ 3500 ಕ್ಯೂಸೆಕ್ ನೇರನ್ನು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವು ಕರ್ನಾಟಕ ರಾಜ್ಯದ ಹಿತಾಸಕ್ತಿ, ರೈತರ ಕೃಷಿ ಚಟುವಟಿಕೆಗಳು ಹಾಗೂ ಭವಿಷ್ಯದ ಕುಡಿಯುವ ನೀರಿನ ಅಗತ್ಯತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ, ರಾಜ್ಯದ ವಿವಿದ ಭಾಗಗಳಲ್ಲಿನ ಕೃಷಿ ಚಟುವಟಿಕೆಗಳು, ರೈತರ ಅವಲಂಬನೆ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಗಣಿಸಿ ರಾಜ್ಯದ ಹಿತಾಸಕ್ತಿಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕೆಂದು ಕೋರಿದರು.
ರಾಜ್ಯದ ರೈತ ಸಮುದಾಯವು ಈಗಾಗಲೇ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಂತಹ ಆದೇಶಗಳು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಜಲಹಕ್ಕು, ರೈತರ ಹಿತಾಸಕ್ತಿ ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಅವಶ್ಯಕತೆಗಳಿಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಶಿಫಾರಸ್ಸು ಮಾಡುವಂತೆ ಮೆಹಬೂಬ್ ಪಾಷ
ವಿನಂತಿಸಿದರು.
ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ, ಅಗತ್ಯ ಕ್ರಮಕೈಗೊಂಡು ಜನರ ಭಾವನೆಗಳಿಗೆ ಸ್ಪಂದಿಸುವಂತೆ ಕೋರಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆ ಬಳಿಕ ಉಪ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷರಾದ ಅಭಿಷೇಕ್, ಇಸ್ಮಾಯಿಲ್, ಸಂಘಟನಾ ಕಾರ್ಯದರ್ಶಿ ತೌಶಿಫ್ ಬೇಗ್, ಕಾರ್ಯದರ್ಶಿ ಜವಾದ್, ಸಂಚಾಲಕ ಇರ್ಫಾನ್, ಹಿರಿಯ ಮುಖಂಡ ಜೆ.ನಿಂಗರಾಜು, ಆಯಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
