ಮೈಸೂರು,ಆ.1: ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಾಗದು ನೀರು ಬಿಡಬಾರದೆಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಮನವಿ ಮಾಡಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಕಬಿನಿ ಜಲಾಶಯದ ನೀರಿನ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಪ್ರತಿ ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ. ಒಳಹರಿವು 40 ಸಾವಿರ ಕ್ಯೂಸೆಕ್ ಮುಟ್ಟಿದೆ. ಪ್ರಕೃತಿ ಯಾರ ಸ್ವತ್ತೂ ಅಲ್ಲ. ಪ್ರಕೃತಿಯ ಅಣತಿಯಂತೆ ನಾವು ಬದುಕುತ್ತಿದ್ದೇವೆ. ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು,ಯಾರೂ ನೀರಿಗೆ ಅಡ್ಡ ಮಲಗಲು ಹೋಗಬೇಡಿ ಎಂದು ಕೋರಿದರು
ನಮ್ಮ ಸ್ನೇಹಿತರು ತಮಿಳುನಾಡಿಗೆ ನೀರು ಹರಿಸಬಾರದೆಂದು ಹೋರಾಟ, ಬಂದ್ ಮಾಡುವುದಾಗಿ ಹೇಳುತ್ತಿದ್ದಾರೆ. ಒಂದು ಹೋರಾಟಕ್ಕೆ ಹಿನ್ನೆಲೆ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹೋರಾಟಕ್ಕೂ ಗೌರವವಿದೆ. ಆದರೆ ಈಗ ಪ್ರತಿಭಟನೆ ಬೇಡ. ಕಾನೂನು ಚೌಕಟ್ಟಿಗೆ ತೊಂದರೆಯಾಗಬಾರದು, ಜನಜೀವನಕ್ಕೆ ತೊಂದರೆಯಾಗಬಾರದು, ತಮಿಳುನಾಡು ಸೇರಿದಂತೆ ನಾವೆಲ್ಲರೂ ಒಂದೇ ದೇಶದ ಪ್ರಜೆಗಳು ಎಂದು ತಿಳಿಸಿದರು.
ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ, ದೇವೇಗೌಡರ ಕಾಲದಲ್ಲೂ ಸಂಕಷ್ಟ ಎದುರಾದಾಗ ಅಂದಿನ ಸಂದರ್ಭಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಮಾಡಿದ್ದು ಸರಿ, ಅವರುಗಳು ಮಾಡಿದ್ದು ತಪ್ಪು ಎಂದು ನಾವು ಹೇಳುವುದಿಲ್ಲ. ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶವಿದೆ. ಇದಕ್ಕೆ ಸುಪ್ರೀಂಕೋರ್ಟ್ ಕೂಡ ಬಲ ನೀಡಿದೆ. ನಾವು ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು. ಜೊತೆಗೆ ನಮ್ಮ ರೈತರನ್ನೂ ಕಾಪಾಡಬೇಕು. ನಮ್ಮ ರೈತರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು
ಬಿಜೆಪಿಯವರ ಕಾವೇರಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಸಹ ನಾನು ಗಮನಿಸಿದ್ದೇನೆ. ತಮಿಳುನಾಡಿನ ಸಂಸದರು, ವಿವಿಧ ಪಕ್ಷಗಳ ನಾಯಕರು ಅವರ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರಿಗೂ ಎಲ್ಲಾ ಅರಿವಿದೆ. ಈ ಹಿಂದೆ ನಿಮ್ಮ ಸುಪರ್ಧಿಯಲ್ಲಿ ಅಣೆಕಟ್ಟು ಕಟ್ಟಿಕೊಳ್ಳಬಹುದು ಎಂದು ಹೇಳಿದ್ದರು. ಇದಕ್ಕೆ ದಾಖಲೆಗಳೂ ಸಹ ಇವೆ ಎಂದು ಸಿಎಂ ತಿಳಿಸಿದರು.
ಮೇಕೆದಾಟು ವಿಚಾರದಲ್ಲಿ ನಮಗೆ ಸುಪ್ರೀಂಕೋರ್ಟ್ ನಲ್ಲಿ ದೊಡ್ದ ಜಯ ಸಿಕ್ಕಿದೆ. ಸಂಸತ್ ನಲ್ಲೂ ಸಹ ಅವರ ಜಾಗದಲ್ಲಿ ಅಣೆಕಟ್ಟು ಕಟ್ಟಿಕೊಳ್ಳಲು ಕಾನೂನು ಏನು ಹೇಳುತ್ತದೆ ಎಂದು ತುಂಬಾ ಚೆನ್ನಾಗಿ ಉತ್ತರ ನೀಡಲಾಗಿದೆ ಎಂದು
ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಅವರು ಸಹ ಸಮಿತಿ ರಚನೆ ಮಾಡುವುದಾಗಿ ತಿಳಿಸಿದ್ದಾರೆ. ನಾನು ಮುಖ್ಯಮಂತ್ರಿ ಆದ ಮೇಲೆ ನಡೆದ ಐತಿಹಾಸಿಕ ತೀರ್ಮಾನ, ಐತಿಹಾಸಿಕ ಹೆಜ್ಜೆ ಇದು ಎಂದು ಹೇಳಿದರು.
ಕಬಿನಿಗೆ ಬಾಗಿನ ಅರ್ಪಿಸುವಿರಾ ಎಂಬ ಮಾದ್ಯಮ ದವರ ಪ್ರಶ್ನೆಗೆ,ಈಗ ಬೇಡ ತಡೆಯಿರಿ. ಏನೂ ಇಲ್ಲದೇ ಈಗಾಗಲೇ ನಮ್ಮ ವಿರುದ್ಧ ದಾಳಿ ಮಾಡುತ್ತಿದ್ದಾರೆ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.
ಶುಭಮುಹೂರ್ತ, ಶುಭ ಘಳಿಗೆಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ಮೈಸೂರಿಗೆ ಬಂದಿದ್ದೇನೆ. ಚಾಮುಂಡಿ ತಾಯಿಗೆ ನಮಿಸಲಿದ್ದೇನೆ. ಮೈಸೂರಿನ ನೆಲದಿಂದ ಸ್ವಾಮಿ ವಿವೇಕಾನಂದ ಅವರು ಅಂದು ದೊಡ್ಡ ಸಂದೇಶ ನೀಡಿದ್ದಾರೆ. ಅಂದಿನ ಕಾಲದಲ್ಲೇ ನಮ್ಮ ಮೈಸೂರು ಮಹಾರಾಜರು ಶೈಕ್ಷಣಿಕ, ಸಾಂಸ್ಕೃತಿಕ ಕೊಡುಗೆಯನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ಅವರು ರಾಜ್ಯದ ಅಭಿವೃದ್ಧಿಗೆ ನೀಡಿದ ಉತ್ತೇಜನ ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬರು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ನುಡಿದರು.
