ಬೆಂಗಳೂರು: ಕನ್ನಡ ಜಾನಪದ ಪರಿಷತ್ ತನ್ನ ಸಂಘಟನೆಯನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ ವಿವಿಧ ದೇಶಗಳಲ್ಲಿ ಘಟಕಗಳನ್ನು ಸ್ಥಾಪಿಸುತ್ತಿದೆ.
ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮಲೇಶಿಯಾದ ಕೌಲಾಲಂಪುರ ನಿವಾಸಿ ಕಿರಣ್ ಕುಮಾರ್ ರೋನಾಡ್ ಅವರನ್ನು ಕನ್ನಡ ಜಾನಪದ ಪರಿಷತ್ ಮಲೇಶಿಯಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪರಿಷತ್ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದ್ದಾರೆ.
ಬೆಂಗಳೂರಿನ ಜಾನಪದ ಕುಟೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಜಾನಪದ ಎಸ್. ಬಾಲಾಜಿಯವರು ಕಿರಣ್ ಕುಮಾರ್ ರೋನಾಡ್ ಅವರಿಗೆ ಅಧಿಕೃತ ನೇಮಕಾತಿ ಪತ್ರವನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಮಲೇಶಿಯಾದಲ್ಲಿ ನೆಲೆಸಿರುವ ಕನ್ನಡಿಗರನ್ನು ಸಂಘಟಿಸುವುದು, ಕನ್ನಡ ಭಾಷೆ ಮತ್ತು ಜಾನಪದ ಪರಂಪರೆಯ ಪರಿಚಯ ಹಾಗೂ ಪ್ರಸಾರ ಮಾಡುವುದು, ಅಲ್ಲಿನ ಕನ್ನಡಿಗರ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದು ಈ ಘಟಕದ ಪ್ರಮುಖ ಉದ್ದೇಶಗಳಾಗಿವೆ.
ವಿದೇಶಗಳಲ್ಲಿಯೂ ಕನ್ನಡದ ಕಂಪು ಮತ್ತು ಜಾನಪದದ ಸೊಗಡನ್ನು ಪಸರಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದ್ದಾರೆ.
