ರಾಯಚೂರು: ಅಜ್ಞಾತ ಕವಿಗಳ ಅಮರ ಕಾವ್ಯವೇ ಜಾನಪದ,ಜಾನಪದ ನಮ್ಮ ಜೀವನದ ಸಾರವಾಗಿದ್ದು, ಅದು ಎಂದಿಗೂ ನಶಿಸುವುದಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದರು
ಮುಂದಿನ ಪೀಳಿಗೆಗೆ ಜಾನಪದ ಪರಂಪರೆಯನ್ನು ಕೊಂಡೊಯ್ಯುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ರಾಯಚೂರು ತಾಲೂಕು ಘಟಕದ ವತಿಯಿಂದ ಶ್ರೀ ಸೂಗೂರೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಾದ್ಯಂತ ಜಾನಪದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಾನಪದವು ನಮ್ಮ ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಪರಂಪರೆಯ ಪ್ರತಿಬಿಂಬವಾಗಿದೆ. ದಾಖಲಾತಿ ಮತ್ತು ತರಬೇತಿಯ ಮೂಲಕ ಜಾನಪದವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಕನ್ನಡ ಜಾನಪದ ಪರಿಷತ್ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಶ್ಲೀಲತೆಯನ್ನು ಒಳಗೊಂಡ ಕೆಲವು ಪ್ರದರ್ಶನಗಳನ್ನು ಜಾನಪದದ ಹೆಸರಿನಲ್ಲಿ ಪ್ರಚಾರ ಮಾಡುತ್ತಿರುವುದು ಖಂಡನೀಯ. ಇಂತಹ ಪ್ರವೃತ್ತಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾಲಾಜಿ ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಲೋಚನಮ್ಮ ಬಸವರಾಜ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಜಾಗೃತಿ ಮೂಡುತ್ತದೆ. ಮುಂದಿನ ದಿನಗಳಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಜಾನಪದ ಜಾತ್ರೆ ಆಯೋಜಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡ ಉಪನ್ಯಾಸ ನೀಡಿ ಗಾದೆ ಮತ್ತು ಒಗಟುಗಳು ಜಾನಪದದ ಪ್ರಮುಖ ಭಾಗಗಳಾಗಿದ್ದು, ಅವುಗಳನ್ನು ಕಲಿಯುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಪ್ರಾಮುಖ್ಯತೆಯಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಡಾ. ಶರಣಪ್ಪ ಗೋನಾಳ್ ಮಾತನಾಡಿ, ಮೌಖಿಕ ಪರಂಪರೆಯ ಜಾನಪದ ಗೀತೆಗಳನ್ನು ಶಾಲಾ-ಕಾಲೇಜುಗಳಲ್ಲಿ ತರಬೇತಿ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯವನ್ನು ಜಿಲ್ಲಾದ್ಯಂತ ವಿಸ್ತರಿಸಲಾಗುವುದು. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಜಿಲ್ಲಾ ಜಾನಪದ ಸಮ್ಮೇಳನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದಂಡಪ್ಪ ಬಿರಾದರ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರಗತಿಗೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ಚೇಗುಂಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
