ಪಾಂಡವಪುರ: ಜಾನಪದ ಎಂದಿಗೂ ನಶಿಸುವುದಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರೂ, ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಲಕ್ಷ್ಮಿ ಸಾಗರದ ಮಂಡ್ಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕವನ್ನು ಡೊಳ್ಳು ಬಾರಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಆಧುನಿಕರಣದ ಭರಾಟೆಯಲ್ಲಿ ಜಾನಪದ ನಶಿಸಿದಂತೆ ಕಂಡರೂ ಎಂದಿಗೂ ನಶಿಸುವುದಿಲ್ಲ,ಕಾಲಕ್ರಮೇಣ ಪರಿವರ್ತನೆಗೊಳ್ಳುತ್ತದೆ ಎಂದು ತಿಳಿಸಿದರು.
ಜಾನಪದ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ, ಮಾನವೀಯ ಮೌಲ್ಯಗಳು ಹಾಗೂ ಜೀವನದ ಪಾಠ ಒಳಗೊಂಡಿರುತ್ತದೆ, ಸರ್ಕಾರ ಮೂಲ ಜನಪದ ಕಲಾವಿದರ ಶಾಸನವನ್ನು 5000ಕ್ಕೆ ಏರಿಸಬೇಕು, ವಯೋಮಿತಿಯನ್ನು 45ಕ್ಕೆ ಇಳಿಸಬೇಕು ಹಾಗೂ ಗ್ರಾಮ ಪಂಚಾಯತಿ ಶೇಕಡ 2 ರಷ್ಟು ಅನುದಾನವನ್ನು ಜನಪದ ಕಲಾವಿದರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಜಿಲ್ಲಾಧ್ಯಕ್ಷ ಡಾ ವಿಜಯಕೊಪ್ಪ ಮಾತನಾಡಿ
ಮಂಡ್ಯ ಜಿಲ್ಲೆಯಲ್ಲಿ ಜನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆಗಾಗಿ ಕನ್ನಡ ಜಾನಪದ ಪರಿಷತ್ ಮಂಡ್ಯ ಜಿಲ್ಲಾ ಘಟಕ ಪ್ರಾರಂಭಿಸಿದೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಘಟಕ ಮಾಡಲಾಗುವುದು ಎಂದು ತಿಳಿಸಿದರು.
ರಾಮನಗರ ಜಿಲ್ಲೆ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ ಮಾತನಾಡಿ ಪರಿಷತ್ತಿನ ದಶಮಾನೋತ್ಸವ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕು ಘಟಕ ಉದ್ಘಾಟನೆ ಆಗಿರುವುದು ವಿಶೇಷ , ಮುಂದಿನ ದಿನಗಳಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲೆ ಜಂಟಿ ಸಮ್ಮೇಳನ ಏರ್ಪಡಿಸಲಾಗುವುದು ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ಪಾಂಡುಪುರ ತಾಲೂಕು ಅಧ್ಯಕ್ಷರಾಗಿ ನೇಮಕವಾದ ಎಲ್ ಚಂದ್ರ ಅವರಿಗೆ ಧ್ವಜ ಹಾಗೂ ಪದಪತ್ರ ನೀಡುವ ಮೂಲಕ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಪದಪ್ರದಾನ ಮಾಡಿದರು.
ಕೆರೆತಣ್ಣೂರಿನ ಸ್ವಾಮಿಗೌಡ ಹಾಗೂ ಆಕಾಶ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಅಂತರಾಷ್ಟ್ರೀಯ ಕಲಾವಿದ ಸೋಬಾನೆ ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್ ಬಿ ಕೆಂಪೇಗೌಡ ಲಕ್ಷ್ಮೀಸಾಗರ, ಕೃಷ್ಣೆ ಗೌಡ,ಶಿವಣ್ಣ ಗೌಡ್ರು, ಅಖಿಲೇಶ್, ಬಾರತಿ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
