ಬೆಂಗಳೂರು: ಜಾನಪದ ಎಂಬುದು ಅನಕ್ಷರಸ್ಥರಿಂದ ಹುಟ್ಟಿಕೊಂಡು ಅಲಿಖಿತ ಸಂವಿಧಾನವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಜಾನಪದ ಪರಿಷತ್ ಅಯೋಜಿಸಿದ್ದ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದಕ್ಕೆ ಯಾವುದೇ ಜಾತಿ, ಮತ, ಧರ್ಮವಿಲ್ಲ,ಜಾನಪದ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಜಾನಪದ ಎಂಬುದು ಈ ನಾಡಿನ ಸೊಬಗನ್ನು ತಿಳಿಸುತ್ತದೆ, ತಾಯಿ ತನ್ನದೇ ಶೈಲಿಯಲ್ಲಿ ಹಾಡನ್ನು ಕಟ್ಟಿ ಮಗುವಿನ ಆರೈಕೆ ಮಾಡುವುದನ್ನು ಕಾಣಬಹುದು ಎಂದು ಹೇಳಿದರು.
ಮನುಷ್ಯನ ಹುಟ್ಟಿನಿಂದ ಸಾವಿನ ವರೆಗೂ ಜಾನಪದ ಅಡಗಿದೆ, ಜಾನಪದವನ್ನು ಉಳಿಸಿ, ಬೆಳೆಸಿ ಮತ್ತು ಬಳಕೆ ಮಾಡುವ ಉದ್ದೇಶದಿಂದ ಜಾನಪದ ಪರಿಷತ್ತು ಕಳೆದ ಒಂದು ದಶಕದಿಂದ ಸುಮಾರು 12 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು,
30ಕ್ಕೂ ವಿವಿಧ ಜಾನಪದ ಪ್ರಕಾರಗಳ ರಾಜ್ಯ ಸಮ್ಮೇಳನವನ್ನು ನಡೆಸಿದೆ. ಜತೆಗೆ ಮಠದಿಂದ ಮಠಕ್ಕೆ ಜಾನಪದ ಸೇರಿದಂತೆ ವಿವಿಧ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರಸಿದ್ದಿಯಾಗಿದ್ದ ಜಾನಪದ ಕಲೆಗಳು ಪ್ರಸ್ತುತ ದೇಶ ವಿದೇಶದಲ್ಲಿ ಪ್ರದರ್ಶನ ವಾಗುತ್ತಿದೆ. ಕನ್ನಡ ಜಾನಪದ ಪರಿಷತ್ತಿನ ನೇತೃತ್ವದಲ್ಲಿ ಜಾನಪದ ಸಂರಕ್ಷಣೆ ಮಾಡುವ ಕಾರ್ಯ ಮಾಡುತ್ತಿರುವುದು ಸಂತೋಷಕರ ಸಂಗತಿ. ಮುಂಬರುವ ದಿನಗಳಲ್ಲಿ ಪರಿಷತ್ತಿನ ಸಹಯೋಗದಲ್ಲಿ ಶ್ರೀಮಠದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಹರಿಕಥೆ ದಾಸರಾದ ದಾನನರಸಿಂಹಮೂರ್ತಿ ಹಾಗೂ ಸೋಬಾನೆ ಪದ ಗಾಯಕಿ ನರಸಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ವಿ.ನೆಗಳೂರು, ಜಾನಪದ ಪರಿಷತ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ರಿಯಾಜ್ ಪಾಷಾ, ರಾಮನಗರ ಜಿಲ್ಲಾಧ್ಯಕ್ಷ ಡಾ.ಕೆ.ಸಿ.ಕಾಂತಪ್ಪ, ತಾಲೂಕು ಅದ್ಯಕ್ಷ ಸಿ.ಹೆಚ್.ಸಿದ್ದಯ್ಯ, ಗೌರವ ಕಾರ್ಯದರ್ಶಿ ಧನಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ನಾಯಕ್, ಜಂಟಿ ಕಾರ್ಯದರ್ಶಿ ಬಿ.ಮಲ್ಲೇಶ್, ಪತ್ರಿಕಾ ಕಾರ್ಯದರ್ಶಿ ಬಿ.ಎಸ್.ವಿಜಯ್ಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಯ್ಯ, ರುದ್ರಪ್ಪನಾಯಕ್, ಸಂಚಾಲಕ ನಾಗೇಶ್ಕುಮಾರ್, ಸಹ ಸಂಚಾಲಕ ಜಗದೀಶ್, ಸದಸ್ಯ ದಿನೇಶ್, ಆನಂದ್ಮೌರ್ಯ, ಕಲಾವಿದ ಚೇತನ್, ನವೀನ್ಕುಮಾರ್, ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.
