ಮೈಸೂರು: ಒಬ್ಬ ಮಹಿಳೆಯಾಗಿ ಜಮ್ಮಡ ಪ್ರೀತ್ ಅಪ್ಪಯ್ಯ ಅವರ ಸಾಧನೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಲಕ್ಷ್ಮಿಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿಶಂಕರ್ ತಿಳಿಸಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ವತಿಯಿಂದ ನಗರದ ಚಾಮುಂಡಿಪುರಂನ ಅಪೂರ್ವಹೋಟೆಲ್ ನಲ್ಲಿ ಆಯೋಜಿಸಿದ್ದ ಬೆಂಗಳೂರು ವಿಶ್ವ ವಿದ್ಯಾನಿಲಯದ ಶೂಟಿಂಗ್ ರೆಂಜ್ ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ರೆಫೆಲ್ ಅಸೋಸಿಯೇಷನ್
(ಕೆಎಸ್ಆರ್ಎ) ವತಿಯಿಂದ ನಡೆದ 14ನೇ ರಾಜ್ಯ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್ ಶಿಪ್ 2026ರಲ್ಲಿ ಎರಡು ಚಿನ್ನದ ಪದಕ ಗಳಿಸಿದ ಮೈಸೂರಿನವರಾದ ಜಮ್ಮಡ ಪ್ರೀತ್ ಅಪ್ಪಯ್ಯ ಅವರನ್ನು ಸನ್ಮಾನಿಸಿ ರವಿಶಂಕರ್ ಮಾತನಾಡಿದರು.
ಮಹಿಳೆಯಾಗಿ ಜಮ್ಮಡ ಪ್ರೀತ್ ಅಪ್ಪಯ್ಯ ಅವರ ಉತ್ಸಾಹ, ಆಶಯ ನೋಡಿದರೆ ಪುರುಷರಿಗೂ ಮಾದರಿಯಾಗಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ್ತಿ ಅರುಣ್ ಸಿನ್ಹಾ ಎರಡು ಕಾಲು ಕಳೆದುಕೊಂಡ ಬಳಿಕವೂ ಎರಡು ವರ್ಷದ ಅವಧಿಯಲ್ಲೇ ಮೌಂಟ್ ಎವರೆಸ್ಟ್ ಏರಿ ಸಾಧನೆ ತೋರಿದರು. ಅಂತೆಯೇ ಇವರ ಸಾಧನೆ ಸಾಮಾನ್ಯವಾದುದಲ್ಲ. ತುಂಬಾ ಉದಾತ್ತವಾದ ಸಂಕಲ್ಪವನ್ನು ಹೊಂದಿ ಕ್ರೀಡೆಯಲ್ಲಿ ಮುನ್ನಡೆಯುತ್ತಿದ್ದು, ಹುಟ್ಟು ಯೋಧರ ನಾಡಿನಿಂದ ಬಂದು ಇಂತಹ ಸಾಧನೆ ಮಾಡಿರುವುದು ಮೆಚ್ಚುವಂತಹುದು ಎಂದು ವೃತ್ತ ನಿರೀಕ್ಷಕ ರವಿಶಂಕರ್ ತಿಳಿಸಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕೊಡಗು ಎಂದರೆ ನಮ್ಮೆಲ್ಲರಿಗೂ ಅಚ್ಚುಮೆಚ್ಚು.ಅಲ್ಲಿಂದ ಬಂದು ನಗರದಲ್ಲಿ ನೆಲೆಸಿ ಪ್ರೀತ್ ಅಪ್ಪಯ್ಯ ಮಾಡಿರುವ ಸಾಧನೆ ನಿಜಕ್ಕೂ ಮೈಸೂರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ,ಜಮ್ಮಡ ಪ್ರೀತ್ ಅಪ್ಪಯ್ಯ ಅವರ ಕ್ರೀಡಾ ಸಾಧನೆ ನಿಜಕ್ಕೂ ಗಮನಾರ್ಹ,ಅವರಿಗೆ ಬೆಂಬಲ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕ್ರೀಡಾಪಟು ಜಮ್ಮಡ ಪ್ರೀತ್ ಅಪ್ಪಯ್ಯ ಮಾತನಾಡಿ, ಮೂಲತಃ ಕೊಡಗಿನವಳಾಗಿದ್ದ ಕಾರಣದಿಂದ ಚಿಕ್ಕ ವಯಸ್ಸಿನಿಂದಲೇ ಬೆಟ್ಟ, ಗುಡ್ಡಾ ಹತ್ತುವುದು ಸಹಜವಾಗಿ ಬಂದಿತು. ಅದೇ ಕಾರಣಕ್ಕೆ ರಾಜ್ಯದ ಹಲವೆಡೆ ಚಾರಣ ಮಾಡಿದ್ದೇನೆ. ಹಿಮಾಲಯ ಹತ್ತುವುದನ್ನು ಸವಾಲಾಗಿ ಸ್ವೀಕರಿಸಿ ಏರಿದ್ದೇನೆ ಎಂದು ಹೇಳಿದರು.
ಶೂಟಿಂಗ್ ಎಂಬುದನ್ನು ಹವ್ಯಾಸವಾಗಿ ಶುರು ಮಾಡಿದ್ದು, ಈಗ ಹೆಚ್ಚು ಸಾಧನೆಗೆ ತಂದು ನಿಲ್ಲಿಸಿದೆ. ಮುಂದೆ ಪಿಸ್ತೂಲು ತರಬೇತಿ ಪಡೆದು ಅಲ್ಲಿಯೂ ಸಾಧನೆ ಮಾಡುವ ಆಸೆಯಿದೆ,ಪ್ರಾರಂಭದಲ್ಲಿ ಅನೇಕರು ನನಗೆ ಈ ವಯಸ್ಸಿನಲ್ಲಿ ಬೇಕಾ ಎಂದು ಹಿಯಾಳಿಸಿದ್ದು ನೆನಪಿದೆ. ಆದರೆ, ಸಾಧನೆ, ಹವ್ಯಾಸಗಳಿಗೆ ವಯಸ್ಸು ಅಡ್ಡ ತರಬಾರದು. ಅದನ್ನು ಮೀರಿ ಪ್ರಯತ್ನಿಸಿದ್ದೇ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊಂಡರು.
ಕೆಪಿಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪ್ರತಿಭೆ ತೋರಿರುವ ಇಂತಹ ಸಾಧಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವುದಕ್ಕೆ 50 ಲಕ್ಷದಷ್ಟು ವೆಚ್ಚ ಭರಿಸಬೇಕಿದೆ. ಹೀಗಾಗಿ ಸರ್ಕಾರಗಳು ಇಂತಹ ಕ್ರೀಡೆಗಳಿಗೂ ನೆರವು ನೀಡುವ ಕೆಲಸ ಮಾಡಬೇಕಿದೆ. ಇಂತಹ ಸಾಧಕರೊಂದಿಗೆ ಸದಾ ಸಂಸ್ಥೆ ಇರಲಿದೆ ಎಂದು ಹೇಳಿದರು.
ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ನಿರೂಪಕ ಅಜಯ್ ಶಾಸ್ತ್ರಿ, ಗಗನ್ ಗೌಡ, ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುರೇಂದ್ರ, ರಾಕೇಶ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
