ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರದಲ್ಲಿ ಜೂ 30 ರಂದು ನಡೆಯಲಿರುವ ಜಿಲ್ಲಾ ಪ್ರಥಮ ಜಾನಪದ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ, ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ ಅವರಿಗೆ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕ ಅಧಿಕೃತ ಆಹ್ವಾನ ನೀಡಿತು.
ಅಜ್ಜಂಪುರದಿಂದ ಬೆಳಿಗ್ಗೆ ಮಂಜುಳಾ ಹುಲ್ಲಹಳ್ಳಿ ಅವರ ನಗರದ ನಿವಾಸಕ್ಕೆ ಆಗಮಿಸಿದ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ, ಫಲ ತಾಂಬೂಲ ನೀಡಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಕೊಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ ಜಿಲ್ಲೆ ಕಂಡ ಅಪರೂಪದ ಸಾಹಿತಿ, ಲೇಖಕಿ ಮತ್ತು ಸಂಶೋಧಕಿ ಡಾ ಮಂಜುಳಾ ಹುಲ್ಲಹಳ್ಳಿ ಅವರನ್ನು ಪ್ರಥಮ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸಂತಸ, ಹೆಮ್ಮೆ ಮತ್ತು ಸಾರ್ಥಕತೆ ತಂದಿದೆ ಎಂದು ಹೇಳಿದರು.
ಅಜ್ಜಂಪುರದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜೂ 30ರಂದು ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲಾಗುವುದು, ಸಮ್ಮೇಳನಾ ಧ್ಯಕ್ಷರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಮೆರವಣಿಗೆ ಮುಖಾಂತರ ವೇದಿಕೆಗೆ ಕರೆ ತರಲಾಗುವುದು ಎಂದು ತಿಳಿಸಿದರು.
ಅಂದು ಬೆಳಗಿನಿಂದ ಸಂಜೆವರೆಗೆ ವಿವಿಧ ಗೋಷ್ಠಿಗಳನ್ನು ನಡೆಸಲಾಗುವುದು, ನಾಡಿನ ಹಿರಿಯ ಜಾನಪದ ಕಲಾವಿದರು, ಸಾಹಿತಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು, ಜಿಲ್ಲೆಯ ಕಲಾವಿದರಿಗೆ ಜಾನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಕವಿತಾ ಕೇಶವ ಮಾತನಾಡಿ ಸಮ್ಮೇಳನದಲ್ಲಿ 50 ಸಾಧಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮ್ಮೇಳನವನ್ನು ನಡೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನನಗೆ ಹೆಮ್ಮೆ ಮತ್ತು ಸಾರ್ಥಕತೆಯನ್ನು ತಂದಿದೆ, ಇನ್ನಷ್ಟು ಸಾಧಿಸುವ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಜ್ಞಾನ, ಸಂಸ್ಕೃತಿ ಮತ್ತು ಪರಂಪರೆಯ ಆಗರವಾಗಿದೆ, ಇಲ್ಲಿ ಹುಡುಕಿದಷ್ಟೂ, ಬರೆದಷ್ಟೂ ಹೊಸ ಹೊಸ ವಿಷಯಗಳು ಲಭ್ಯವಾಗುತ್ತವೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷೆ ಬಿ.ಕೆ. ಪುಷ್ಪ ಮಾತನಾಡಿದರು, ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷೆ ಶಾಂತಾ ಗುರುಮೂರ್ತಿ, ಪದಾಧಿಕಾರಿಗಳಾದ ವಿಜಯಕುಮಾರಿ, ರಂಜಿತ,ಮಧು, ಪುಟ್ಟಮ್ಮ, ಬಸಮ್ಮ, ಮಂಜುಳ, ಪುಣ್ಯವತಿ, ಪ್ರೇಮ, ಮಹಾದೇವಿ ಹಾಜರಿದ್ದರು.
