(ವರದಿ:ಎಸ್.ಪುಟ್ಟಸ್ವಾಮಿಹೊನ್ನೂರು
ಯಳಂದೂರು)
ಯಳಂದೂರು: ಯಳಂದೂರು ಸಮೀಪದ ಹೊಂಗನೂರು ಗ್ರಾಮದ ಹಿರೇಕೆರೆಯಲ್ಲಿ ನೂರಾರು ಸತ್ತ ಮೀನುಗಳನ್ನು ಬಿಟ್ಟಿರುವುದರಿಂದ ಕೆರೆಯ ನೀರು ಕಲುಷಿತಗೊಂಡು ಧನಕರುಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಹಿರೇಕೆರೆಯಲ್ಲಿ ಯಾರೋ ನೂರಾರು ಸತ್ತ ಮೀನುಗಳನ್ನು ಕೆರೆ ಸುತ್ತ ನೀರಿನಲ್ಲೇ ಬಿಟ್ಟು ಹೋಗಿದ್ದಾರೆ.ಇದರಿಂದಾಗಿ ಕೆರೆಯ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದ್ದು, ಧನಕರುಗಳಿಗೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ಗ್ರಾಮದ ಬಿಆರ್ಟಿ ಅರಣ್ಯ ಪದೇಶದ ಅಂಚಿನಲ್ಲಿರುವ ಹಿರೇಕೆರೆ ಪ್ರದೇಶ ಕೃಷಿಗೆ ಪಮುಖ ನೀರಿನ ಆಸರೆಯಾಗಿದೆ. ಆದರೆ ಕಳೆದ ಹಲವು ದಿನಗಳಿಂದ ಕೆರೆಯಲ್ಲಿ 2 ರಿಂದ 3 ಅಡಿಯಷ್ಡು ನೀರು ಶೇಕರಣೆಯಾಗಿದೆ.
ಕಳೆದ ಹಲವು ದಿನಗಳಿಂದ ಕೆರೆಯಲ್ಲಿ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿದ್ದು, ಗುತ್ತಿಗೆ ಪಡೆದ ಗುತ್ತಿಗೆದಾರ ಸತ್ತ ಮೀನುಗಳನ್ನು ನೀರಿನಿಂದ ಹೊರತೆಗೆಯದೆ ಕೆರೆಯಯಲ್ಲಿ ಹಲವು ದಿನಗಳಿಂದ ಹಾಗೆಯೇ ಬಿಟ್ಟು ಹೋಗಿದ್ದಾರೆ.
ಇದರಿಂದ ಕೆರೆಯ ನೀರು ಕಲುಷಿತಗೊಳ್ಳುವಂತಾಗಿದೆ.ಜತೆಗೆ ಕೆರೆಯ ಸುತ್ತಲೂ ದುರ್ವಾಸನೆ ಹರಡಿದೆ,ಇದರಿಂದ ಸುತ್ತಮುತ್ತಲ್ಲಿನ ವಾಸಿಗಳು ಹಾಗೂ ರೈತರು ಮೂಗು ಮುಚ್ಚಿಕೊಂಡು ವ್ಯವಸಾಯ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚಿನ ಗಾಳಿ ಬಿಸುವ ಪರಿಣಾಮ ಮತ್ತಷ್ಟು ದುರ್ವಾಸನೆ ತೀವ್ರವಾಗಿದ್ದು, ತೊಂದರೆ ಉಂಟಾಗಿದೆ ಎಂದು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಾಮದಾಸಯ್ಯ ಹಾಗೂ ಡಾ.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಆರೋಪಿಸಿದ್ದಾರೆ.
