ಯುಎಇ: 77ನೇ ಗಣರಾಜ್ಯೋತ್ಸವದ ಹೊತ್ತಿನಲ್ಲೇ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆದಿದ್ದು,ಪಾಕಿಸ್ತಾನ ಮೈಪರೆಚಿಕೊಳ್ಳುತ್ತಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬೆನ್ನಲ್ಲೇ, ಪಾಕಿಸ್ತಾನದ ವಿಮಾನ ನಿಲ್ದಾಣದ ಒಪ್ಪಂದದಿಂದ ಯುಎಇ ಹಿಂದೆ ಸರಿದಿದೆ.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಯುಎಇಗೆ ಹಸ್ತಾಂತರಿಸಲು ಮಾತುಕತೆ ನಡೆದಿತ್ತು,ಆದರೆ ಇತ್ತೀಚೆಗೆ ಒಪ್ಪಂದದ ಮಾತುಕತೆಗಳು ವಿಫಲವಾಗಿವೆ.ಹಾಗಾಗಿ ಯುಎಇ ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ,ಆದ್ದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಶಾಕ್ ಆಗಿದೆ.
ಜನವರಿ 19 ರಂದು ಯುಎಇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು.ಆ ನಂತರವೇ ಯುಎಇ ಯು ಟರ್ನ್ ಹೊಡೆದಿದೆ.ಜತೆಗೆ ಭಾರತದಂತಹ ಸ್ಥಿರ ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ ಎಂದು ಹೇಳಲಾಗಿದೆ.
ಭಾರತದೊಂದಿಗೆ 200 ಬಿಲಿಯನ್ ವ್ಯಾಪಾರದ ಗುರಿಯನ್ನು ಯುಎಇ ಹೊಂದಿದೆ. ಈ ಹಿಂದೆ ಯುಎಇ ಪಾಕಿಸ್ತಾನಕ್ಕೆ ಆಪ್ತ ಮಿತ್ರನಾಗಿತ್ತು. ಆದರೆ ಈಗ ರಕ್ಷಣೆ, ತಂತ್ರಜ್ಞಾನ ಮತ್ತು ಶಕ್ತಿಯ ಕ್ಷೇತ್ರದಲ್ಲಿ ಭಾರತದೊಂದಿಗೆ ಯುಎಇ ಮಾಡಿಕೊಳ್ಳುತ್ತಿರುವ ದೊಡ್ಡ ಒಪ್ಪಂದಗಳು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಈಡು ಮಾಡಿದೆ.
ಗುಜರಾತ್ನ ಧೋಲೇರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಯುಎಇ ಆಸಕ್ತಿ ತೋರಿದೆ. ಅಂದರೆ ಪಾಕಿಸ್ತಾನದಲ್ಲಿ ಹೂಡಿಕೆ ಮಾಡಬೇಕಿದ್ದ ಹಣ ಈಗ ಭಾರತದ ಕಡೆಗೆ ಹರಿಯುತ್ತಿದೆ.
ಭಾರತದ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಮತ್ತು ಲಘು ಶಸ್ತ್ರಾಸ್ತ್ರಗಳನ್ನು ಜಂಟಿಯಾಗಿ ತಯಾರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಇವುಗಳನ್ನು ಭಾರತ ಮತ್ತು ಯುಎಇ ಸೇನೆಗಳು ಬಳಸುವುದಲ್ಲದೆ, ಇತರ ದೇಶಗಳಿಗೂ ರಫ್ತು ಮಾಡುವ ಗುರಿ ಹೊಂದಲಾಗಿದೆ.
