ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತನೇ ತನ್ನ ಸ್ನೇಹಿತನನ್ನು ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಅಶೋಕಪುರಂ ನಲ್ಲಿ
ನಡೆದಿದೆ.
ಕೊಲೆ ಆರೋಪಿ ಅಶೋಕಪುರಂ ನಿವಾಸಿ ನಂದೀಶ್ (40) ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ಮಹೇಶ್ (40).
ನಂದೀಶ್ ಮತ್ತು ಮಹೇಶ್ ಇಬ್ಬರು ಸ್ನೇಹಿತರಾಗಿದ್ದು, ಬೆಳಿಗ್ಗೆ ಇಬ್ಬರು ಒಟ್ಟಿಗೆ ಕುಳಿತು ಮದ್ಯಪಾನ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಈ ವೇಳೆ ಕೋಪಗೊಂಡ ನಂದೀಶ್, ಅಲ್ಲೇ ಇದ್ದ ಮರದ ತುಂಡಿನಿಂದ ಮಹೇಶ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದ ತಕ್ಷಣ ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಪೊಲೀಸರು ಆರೋಪಿ ನಂದೀಶ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮೈಸೂರು ನಗರದಲ್ಲಿ ಒಂದು ತಿಂಗಳೀಚೆಗೆ ಇದು 5ನೇ ಕೊಲೆ ಯಾಗಿದ್ದು ಜನ ಆತಂಕಗೊಂಡಿದ್ದಾರೆ.
