ಮೈಸೂರು: ಮೈಸೂರಿನ ಹಿನಕಲ್ ಫ್ಲೈಓವರ್ನಿಂದ ವಿಜಯನಗರ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಬಿಎಂಡಬ್ಲ್ಯೂ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಉರುಳಿದೆ.
ಡಿಕ್ಕಿಯ ರಭಸಕ್ಕೆ ಡಿವೈಡರ್ನಲ್ಲಿದ್ದ ಮೂರು ಮರಗಳು ಧರೆಗುರುಳಿದೆ, ಕಾರು ವಿರುದ್ಧ ದಿಕ್ಕಿಗೆ ತಿರುಗಿ ಪೊದೆಗಳ ಮಧ್ಯೆ ಸಿಲುಕಿಕೊಂಡಿದೆ,ಈ ದೃಶ್ಯ ನೋಡಿದರೆ ಭಯವಾಗುವಂತಿದೆ.
ಆದರೂ ಅದೃಷ್ಟವಶಾತ್ ಚಾಲಕ ಸೇರಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ KA09ML9945 ನೋಂದಣಿ ಸಂಖ್ಯೆಯ ಬಿಎಂಡಬ್ಲ್ಯೂ ಕಾರು ಹಿಂಕಲ್ ಫ್ಲೈಓವರ್ ಇಳಿದು ವಿಜಯನಗರದ ಕಡೆಗೆ ಅತಿವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆಯ ಬಲಭಾಗದಲ್ಲಿರುವ ಡಿವೈಡರ್ಗೆ ನುಗ್ಗಿದೆ.
ಡಿವೈಡರ್ನಲ್ಲಿ ಸಾಲಾಗಿ ನೆಟ್ಟಿದ್ದ ಮೂರು ಮಧ್ಯಮ ಗಾತ್ರದ ಮರಗಳಿಗೆ ಕಾರು ಬಲವಾಗಿ ಅಪ್ಪಳಿಸಿದೆ. ಮೂರೂ ಮರಗಳು ಬುಡಸಮೇತ ಮುರಿದು ಬಿದ್ದಿವೆ.
ಅಪಘಾತದ ರಭಸಕ್ಕೆ ಕಾರು 180 ಡಿಗ್ರಿ ತಿರುಗಿ ವಿರುದ್ಧ ದಿಕ್ಕಿಗೆ, ಅಂದರೆ ಹಿಂಕಲ್ ಫ್ಲೈಓವರ್ ಕಡೆಗೆ ಮುಖ ಮಾಡಿ ನಿಂತಿದೆ. ಕಾರಿನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ, ಮುಂಭಾಗದ ಏರ್ಬ್ಯಾಗ್ಗಳು ತೆರೆದುಕೊಂಡಿವೆ.
ರಾತ್ರಿ ವೇಳೆಯಾದರೂ ಅಪಘಾತದ ಭಾರೀ ಸದ್ದು ಕೇಳುತ್ತಿದಂತೆ ಹತ್ತಿರದ ನಿವಾಸಿಗಳು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಕಾರಿನ ಬಾಗಿಲು ಜಾಮ್ ಆಗಿದ್ದರಿಂದ ಕಿಟಕಿ ಗಾಜು ಒಡೆದು ಚಾಲಕ ಹಾಗೂ ಇತರರನ್ನು ಹೊರತೆಗೆದಿದ್ದಾರೆ. ಸ್ಥಳೀಯರು ಆಂಬುಲೆನ್ಸ್ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ವಿಷಯ ತಿಳಿದು ವಿ.ವಿ.ಪುರಂ ಸಂಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಅಪಘಾತದಿಂದಾಗಿ ಹಿಂಕಲ್-ವಿಜಯನಗರ ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಕ್ರೇನ್ ಸಹಾಯದಿಂದ ಜಖಂಗೊಂಡ ಕಾರನ್ನು ತೆರವುಗೊಳಿಸಿ ಠಾಣೆಗೆ ಸಾಗಿಸಲಾಯಿತು.
ಈ ರಸ್ತೆಯಲ್ಲಿ 40 ಕಿ.ಮೀ ವೇಗ ಮಿತಿ ನಿಗದಿಪಡಿಸಲಾಗಿದೆ. ಆದರೆ ಕಾರು 90-100 ಕಿ.ಮೀ ವೇಗದಲ್ಲಿ ಬಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
