ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಮೈಸೂರು ಯುವ ದಸರಾ 2026 ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಯುವ ದಸರಾ ಅ.13ರಿಂದ 17ರವರೆಗೆ ಮೈಸೂರಿನ ರಿಂಗ್ ರಸ್ತೆಯಲ್ಲಿರುವ, ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಅದ್ಧೂರಿ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು
ಯುವ ದಸರಾ ಉಪ ವಿಶೇಷಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಆಲ್ಬಂ ಸಾಂಗ್ ಬಿಡುಗಡೆ ಮಾಡಿ ಅವರು ಮಾಹಿತಿ ನೀಡಿದರು.
ಯುವ ದಸರಾ ಕಾರ್ಯಕ್ರಮವು ಅ. 13ರಂದು ಸಂಜೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ. ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ವೇದಿಕೆ ಮತ್ತು ಆಸನ ವ್ಯವಸ್ಥೆಗಳನ್ನು ಸರ್ಕಾರದ ಶಿಷ್ಟಾಚಾರದಂತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯುವ ದಸರಾ ಆಲ್ಬಂ ಗೀತೆಗೆ ಸೋಮಶೇಖರ್ ಜಿ.ಎಸ್. ಮತ್ತು ಮನೋಜ್ ಸೌಗಂಧ್ ಅವರು ಸಾಹಿತ್ಯ ರಚಿಸಿದ್ದು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆ ಯುವಜನರ ಉತ್ಸಾಹ, ಮೈಸೂರಿನ ಸಾಂಸ್ಕೃತಿಕ ವೈಭವ ಮತ್ತು ದಸರಾ ಸಂಭ್ರಮವನ್ನು ಪ್ರತಿಬಿಂಬಿಸಲಿದೆ ಎಂದು ಬಾಲದಂಡಿ ತಿಳಿಸಿದರು.
ಅ. 13 ರಂದು ಉದ್ಘಾಟನಾ ಸಮಾರಂಭ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಕಾರ್ಯಕ್ರಮ, ಅ.14: ಶಂಕರ್–ಎಹ್ಸಾನ್–ಲಾಯ್, ಅ.15: ಸಿದ್ ಶ್ರೀರಾಮ್,ಅ.16 ರಂದು ಸ್ಯಾಂಡಲ್ವುಡ್ ನೈಟ್ಸ್, ಅ. 17ರಂದು ಜಾಸ್ಮಿನ್ ಸ್ಯಾಂಡ್ಲಾಸ್.
ಯುವ ದಸರಾ 2026ರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ಒಳಗೊಂಡ ಬೃಹತ್ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ದೂರದ ಊರುಗಳಿಂದ ಆಗಮಿಸುವ ಕಲಾಭಿಮಾನಿಗಳು, ಯುವಜನರು ಮತ್ತು ಸಾರ್ವಜನಿಕರಿಗೆ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸವಿಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆಹಾರ ಮೇಳದಲ್ಲಿ ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ವಿವಿಧ ಶೈಲಿಯ ಆಹಾರ ಪದಾರ್ಥಗಳು ಲಭ್ಯವಿರಲಿದ್ದು, ಇದು ಯುವ ದಸರಾಕ್ಕೆ ಆಗಮಿಸುವವರಿಗೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ಸುಮಾರು 14 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸುಮಾರು 80 × 60 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕಾರ್ಯಕ್ರಮಗಳಿಗೆ ಅನುಗುಣವಾಗಿ ಜರ್ಮನ್ ತಂತ್ರಜ್ಞಾನ ಆಧಾರಿತ d&b audiotechnik ಧ್ವನಿ ವ್ಯವಸ್ಥೆ, DiGiCo Quantum ಮಿಕ್ಸರ್ ಹಾಗೂ ಅತ್ಯಾಧುನಿಕ ಲೈಟಿಂಗ್ ಮತ್ತು ಲೇಸರ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಪ್ರೇಕ್ಷಕರಿಗೆ ಉನ್ನತ ಗುಣಮಟ್ಟದ ಧ್ವನಿ ಮತ್ತು ಬೆಳಕಿನ ಅನುಭವ ನೀಡುವುದು ಇದರ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವುದರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಕೆಎಸ್ಆರ್ಪಿ, ಡಿಎಆರ್, ಕ್ಯೂಆರ್ಟಿ ತಂಡಗಳು ಹಾಗೂ ಇತರ ಭದ್ರತಾ ಘಟಕಗಳನ್ನು ನಿಯೋಜಿಸುವ ಯೋಜನೆಯಿದೆ.
ಜೊತೆಗೆ ಡ್ರೋನ್ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಮತ್ತು ಕಾರ್ಯಕ್ರಮದ ಶಾಂತಿಯುತ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದು ಮಲ್ಲಿಕಾರ್ಜುನ ಬಾಲದಂಡಿ ವಿವರಿಸಿದರು.
ಕಾರ್ಯಕ್ರಮಗಳ ಸಮರ್ಪಕ ನಿರ್ವಹಣೆಯ ಉದ್ದೇಶದಿಂದ ಯುವ ದಸರಾ ಉಪಸಮಿತಿಯ ಅಧಿಕಾರೇತರ ಸಮಿತಿಯ ಅಧ್ಯಕ್ಷರನ್ನಾಗಿ ರಾಯರ ಹುಂಡಿ ರವಿ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ ಒಟ್ಟು 187 ಸದಸ್ಯರು ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯುವ ದಸರಾ ಕಾರ್ಯಕ್ರಮಗಳ ಆಯೋಜನೆ, ಸಂಘಟನೆ ಮತ್ತು ಯಶಸ್ವಿ ಅನುಷ್ಠಾನದಲ್ಲಿ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಮೈಸೂರು ಯುವ ದಸರಾ 2026ಕ್ಕೆ ಸಾರ್ವಜನಿಕರು, ಯುವಜನರು ಹಾಗೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಕಾರ್ಯಧ್ಯಕ್ಷ ಸೋಮಶೇಖರ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
