ಬೆಂಗಳೂರು: ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ, ಸರ್ಕಾರಿ ಆಸ್ಪತ್ರೆಗಳು ಕೋಮ ಸ್ಥಿತಿಯಲ್ಲಿವೆ ಎಂದು ನಾನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಎಲ್ಲವೂ ಸರಿಯಿದೆ ಎಂದು ತಿಪ್ಪೆ ಸಾರಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಗೆ ಈಗ ಮಾಧ್ಯಮಗಳೇ ಕನ್ನಡಿ ಹಿಡಿದಿವೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ವ್ಯಂಗ್ಯವಾಡಿದ್ದಾರೆ.
ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನಿಲ್ಲ, ಖಾಲಿ ಇರುವ ವೈದ್ಯರು, ಶುಷ್ರೂಷಕರ ಹುದ್ದೆಗಳ ಭರ್ತಿ ಇಲ್ಲ, ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳ ಬಾಕಿ ಪಾವತಿ ಮಾಡದೇ ಸ್ಕ್ಯಾನಿಂಗ್ ಸೇವೆಯಿಲ್ಲ, ಹೀಗೆ ಸಾಲು ಸಾಲು ಸಮಸ್ಯೆಗಳಿಂದ ರಾಜ್ಯಾದ್ಯಂತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟ, ಬಣ ಬಡಿದಾಟ ಇದರಲ್ಲೇ ಮುಳುಗಿರುವ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆಯನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿ ಸರ್ಕಾರಿ ಆಸ್ಪತ್ರೆಗಳನ್ನು ಅಧೋಗತಿಗೆ ತಳ್ಳಿದೆ. ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಜನ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಏಳುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.
