ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 416ನೇ ಆವೃತ್ತಿ ಜಂಬೂಸವಾರಿ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ದೇಶ,ವಿದೇಶಗಳಿಂದ ಜನ ಸಾಗರವೆ ಹರಿದು ಬಂದಿತ್ತು.
ಸಾಂಸ್ಕೃತಿಕ ನಗರಿ ಮೈಸೂರು ಇಂದು ವಿಜಯದಶಮಿ ಸಂಭ್ರಮದಲ್ಲಿ ಮಿಂದೆದ್ದಿತು.
ಮಧ್ಯಾಹ್ನ 1:35 ರಿಂದ 1:56ರ ವರೆಗೆ ಇದ್ದ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ವಿಶೇಷ ಪೂಜೆ ನೆರವೇರಿತು.
ಈ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರು ಭಾಗವಹಿಸಿದ್ದರು.
ನಂದಿಧ್ವಜ ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ನಾಡಿನ ಎಲ್ಲ ಜನರಿಗೂ ಆರೋಗ್ಯ, ಸಂಪತ್ತು ಹಾಗೂ ಸಮೃದ್ಧ ಮಳೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ನಂದಿಧ್ವಜ ಪೂಜೆ ನೆರವೇರುತ್ತಿದ್ದಂತೆ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ದೊರೆಯಿತು.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧಚಿತ್ರಗಳು ಹಾಗೂ 140ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.
ಸಂಜೆ 4.10 ರಿಂದ 4.35ರ ವರೆಗೆ ಇದ್ದ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿತು.
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಹಸಿರು ರೇಷಿಮೆ ಸೀರೆ ಉಟ್ಟು ವಿರಾಜಮಾನಳಾಗಿದ್ದಳು. ಕ್ಯಾಪ್ಟನ್ ಪ್ರಶಾಂತ ಅಂಬಾರಿ ಹೊತ್ತು ರಾಜ ಗಾಂಬೀರ್ಯದಿಂದ ಸಾಗಿತು.
ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರರ್
ಹಾಗೂ ರಾಜವಂಶಸ್ಥ ಯಾದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಾಯಿ ಚಾಮುಂಡೇಶ್ವರಿಗೆ ಪುಷ್ಪ ನಮನ ಸಲ್ಲಿಸಿದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ,
ತೆಲಾಂಗಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ,
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ಪೊಲೀಸ್ ಕಮಿಷನರ್ ಸೀಮಾಲಾಟ್ಕರ್ ಪುಷ್ಪ ನಮನ ಸಲ್ಲಿಸಿದರು.
ಮೆರವಣಿಗೆಗೆ ಪೊಲೀಸ್ ಬ್ಯಾಂಡ್ ಹಾಗೂ ಅಶ್ವಾರೋಹಿ ದಳ ಮೆರಗು ನೀಡಿತು.
