ಮೈಸೂರು: ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ಸಂಬಂಧ ಎನ್ಐಸಿಯುನ ಉಸ್ತುವಾರಿ ವೈದ್ಯರು ಸೇರಿದಂತೆ ಏಳು ಮಂದಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.
ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಎನ್ಐಸಿಯುನಲ್ಲಿ ರಮಾಬಾಯಿನಗರದ ಸಿದ್ಧಾರ್ಥ ಎಂಬವರ ನವಜಾತ ಶಿಶು ಮೃತಪಟ್ಟಿತ್ತು. ಪೋಷಕರು ಇರುವೆ ಕಚ್ಚಿ ಮಗು ಸಾವನ್ನಪ್ಪಿದೆ ಎಂಬ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯಕೀಯ ಅಧೀಕ್ಷಕ ಲಕ್ಷ್ಮೀಕಾಂತ್ ಅವರು ಏಳು ಮಂದಿಗೆ 48 ಗಂಟೆಯೊಳಗೆ ಸೂಕ್ತ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.
ಎನ್ಐಸಿಯುನ ಕರ್ತವ್ಯನಿರತ ವೈದ್ಯರು, ವಾರ್ಡ್ ಇನ್ ಚಾರ್ಜ್ ವೈದ್ಯರು, ಶುಶ್ರೂಷಕಿ, ಸ್ವಚ್ಛತಾ ಸಿಬ್ಬಂದಿ ಅಲ್ಲದೆ, ಮೃತ ಮಗುವನ್ನು ಹಸ್ತಾಂತರ ಮಾಡುವಾಗ ಉಡಾಫೆಯಿಂದ ವರ್ತಿಸಿದ ನರ್ಸ್ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
ಮಗುವಿನ ಪೋಷಕರು ಮಾಡಿರುವ ಆರೋಪಗಳನ್ನು ಉಲ್ಲೇಖಿಸಿ ನೋಟಿಸ್ ಕೊಡಲಾಗಿದ್ದು, 48 ಗಂಟೆಯೊಳಗೆ ಉತ್ತರ ಕೊಡಬೇಕು. ತಪ್ಪಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಮಗುವಿನ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಪೋಷಕರ ಸಮ್ಮುಖದಲ್ಲಿ ನಡೆಸಲಾಗಿದ್ದು, ಇರುವೆ ಕಚ್ಚಿದ್ದರಿಂದಲೇ ಮೃತಪಟ್ಟಿದೆಯೇ ಎಂಬುದರ ಬಗ್ಗೆ ವರದಿ ಪಡೆಯಲು ಮಧ್ಯಪ್ರದೇಶದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಪೊಲೀಸರು ತಾಯಿ, ತಂದೆ ಹಾಗೂ ಪೋಷಕರಿಂದ ಹೇಳಿಕೆಯನ್ನು ಪಡೆದುಕೊಂಡರು.
ಆಸ್ಪತ್ರೆಗೆ ದಾಖಲಾದ ದಿನದಿಂದ ಮಗು ಸಾವಿನ ತನಕ ನಡೆದಿರುವ ಎಲ್ಲ ದಿನಗಳ ದಿನಚರಿ ಕುರಿತಂತೆ ಮಾಹಿತಿ ಪಡೆದಿದ್ದಾರೆ.
