ಮೈಸೂರು: ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ನಡೆಯುತ್ತಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಮೈಸೂರಿನ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ನಟ ವಸಿಷ್ಠ ಸಿಂಹ ಕರೆ ನೀಡಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ನಟ ವಸಿಷ್ಠ ಸಿಂಹ ಅವರನ್ನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತ ಸಮೂಹ ಹನುಮಾನ್ ಚಾಲೀಸ ಕಾರ್ಯಕ್ರಮಕ್ಕೆ ಆಹ್ವಾನಿಸಿದ ವೇಳೆ ಅವರು ಈ ಕರೆ ನೀಡಿದರು.
ಅವಧೂತ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶಕ್ತಿ ಅಪಾರವಾದುದು, ಮೈಸೂರಿನ ಧಾರ್ಮಿಕ ಆಧ್ಯಾತ್ಮಿಕ ಶಕ್ತಿಯನ್ನ ವಿಶ್ವದೆಲ್ಲೆಡೆ ವ್ಯಾಪಕವಾಗಿ ಪಸರಿಸಿದ್ದಾರೆ, ನಾನು ಸಹ ಚಿಕ್ಕವಯಸ್ಸಿನಿಂದಲೂ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಭಕ್ತನಾಗಿ ಶೈಕ್ಷಣಿಕ ದಿನಗಳಿಂದಲೂ ಕಾರ್ಯಸಿದ್ಧಿ ಆಂಜನೇಯನ ಬಳಿ ಕಾಯಿಯನ್ನ ಕಟ್ಟಿ ಸಂಕಲ್ಪ ಮಾಡಿ ಏಕಾಗ್ರತೆ ಸಿದ್ಧಿಗಳ ಮೂಲಕ ಸಾಧನೆಯತ್ತ ಯಶಸ್ವಿಯಾಗಿದ್ದೇನೆ ಎಂದು ಸ್ಮರಿಸಿದರು.
ತಪಸ್ಸು ಧ್ಯಾನ ಪ್ರಾರ್ಥನೆಯಿಂದ ಮನುಷ್ಯನ ಆರೋಗ್ಯ ಆಯಸ್ಸು ವೃದ್ದಿಸುತ್ತದೆ, ಲಕ್ಷಾಂತರ ಮಂದಿಯಿಂದ ನಡೆಯುವ ಶ್ರೀ ಹನುಮಾನ್ ಚಾಲೀಸ ಪಾರಾಯಣದಿಂದ ಮೈಸೂರಿನೆಲ್ಲೆಡೆ ಆಧ್ಯಾತ್ಮಿಕ ಶಕ್ತಿ ಸಂಚರಿಸಲಿದೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ವಸಿಷ್ಠ ಸಿಂಹ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಆಧ್ಯಾತ್ಮಿಕ ವಿಶ್ಲೇಷಕ ವಿಕಾಸ್ ಶಾಸ್ತ್ರಿ, ನಿರೂಪಕ ಅಜಯ್ ಶಾಸ್ತ್ರಿ, ಭೈರತ್ತಿ ಲಿಂಗರಾಜು,ಅಮಿತ್, ಸಚಿನ್, ಕುಮಾರ್ ಮತ್ತಿತರರು ಹಾಜರಿದ್ದರು.
