ಬೆಂಗಳೂರು: ಬೆಂಗಳೂರು ನಗರ ಕಳೆದ 15 ವರ್ಷಗಳಿಂದ ಉದ್ಯಾನ ನಗರಿ ಎಂಬ ಬಿರುದನ್ನು ಕಳೆದುಕೊಂಡು ಗಾರ್ಬೇಜ್ ನಗರ ವೆಂಬ ಕುಖ್ಯಾತಿಗೆ ಒಳಗಾಗಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಕಸ ಕ್ಕಾಗಿ ನಡೆಯುವ ಯುದ್ಧವನ್ನು ತಪ್ಪಿಸಲು ಕೂಡಲೇ ಸರ್ಕಾರ ಹಸಿರು ಕಾರ್ಯಸೂಚಿಯನ್ನು ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಬೆಂಗಳೂರಿನ ಕಸ ನಿರ್ವಹಣೆ ಸಮಸ್ಯೆಯ ಪರಿಹಾರಕ್ಕಾಗಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಪೃಥ್ವಿ ರೆಡ್ಡಿ, ಈಗಾಗಲೇ ಬೆಂಗಳೂರಿನ ನಿವಾಸಿಗಳು ಕಸ ನಿರ್ವಹಣೆಗೆ ತಮ್ಮ ಕಟ್ಟಡ ತೆರಿಗೆಯ ಜೊತೆ ನೂರಾರು ಕೋಟಿ ರೂ. ಕಸದ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಯಾರಿಗೂ ಸಹ ಇಷ್ಟೊಂದು ಬೃಹತ್ ಹಣವನ್ನು ಕಸ ನಿರ್ವಹಣೆಗೆ ನೀಡುತ್ತಿದ್ದೇವೆ ಎಂಬ ಅರಿವು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ನಾಗರೀಕರೆಲ್ಲರೂ ತಾವು ಪಾವತಿಸುತ್ತಿರುವ ಕೋಟ್ಯಾಂತರ ಹಣ ಭ್ರಷ್ಟರ ಪಾಲಾಗುತ್ತಿರುವುದನ್ನು ನಿಲ್ಲಿಸಲು ಜಲಾಂದೋಲನ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರನ್ನು ಕಸಮುಕ್ತ ನಗರಿಯನ್ನಾಗಿಸಲು ನಗರದಲ್ಲಿ ವಾಸಿಸುತ್ತಿರುವ ಎಲ್ಲರೂ ನಗರವನ್ನು ಪ್ರೀತಿಸುವ, ಬೆಳೆಸುವ ,ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕು, ಸರ್ಕಾರ ಸಹ ಕಠಿಣ ಮಾನದಂಡಗಳನ್ನು ಹೊಂದಿರುವ ಹಸಿರು ಕಾರ್ಯಸೂಚಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವೃಕ್ಷ ವೈದ್ಯ ಡಾ. ನಿಶಾಂತ್ ಮಾತನಾಡಿ ಈ ಹಿಂದಿನ ಸ್ಟೀಲ್ ಮೇಲ್ಸೇತುವೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಉಳಿವಿಗಾಗಿ ನಡೆದಂತಹ ಬೃಹತ್ ಹೋರಾಟಗಳು ಸಂಪೂರ್ಣ ಸ್ತಬ್ಧವಾಗಿವೆ. ಕೂಡಲೇ ನಗರವನ್ನು ಉಳಿಸಲು ಪರಿಸರವಾದಿಗಳು, ತಜ್ಞರು,ಹೋರಾಟಗಾರರು ಮುಂದಾಗಿ ಹೋರಾಟಗಳನ್ನು ರೂಪಿಸುವ ಮೂಲಕ ನಗರವನ್ನು ಉಳಿಸುವಂತಹ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.
ಕಸ ವಿಲೇವಾರಿ ತಜ್ಞ ರಾಜೇಶ್ ಬಾಬು ಮಾತನಾಡಿ, ಕಸ ಸಂಗ್ರಹಣೆ ಮಾಡಿ ಸಂಸ್ಕರಣೆ ಮಾಡುತ್ತಿಲ್ಲ, ಕೇವಲ ಡಂಪಿಂಗ್ ಮಾತ್ರ ಆಗುತ್ತಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು ಕೇವಲ ಟೆಂಡರ್ ಗಳನ್ನು ಕರೆಯುವ ಸಂಸ್ಥೆಯಾಗಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಸಾವಿರಾರು ಟನ್ ಕಸ ಸಂಗ್ರಹಣೆಯ ಲೆಕ್ಕವನ್ನು ತೋರಿಸಿ ಜನತೆಯ ತೆರಿಗೆ ಹಣವನ್ನು ಸಂಪೂರ್ಣ ಪೋಲು ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಅನೇಕ ವರ್ಷಗಳಿಂದ ನಗರದಲ್ಲಿಯೇ ಬಿಡುಬಿಟ್ಟಿದ್ದಾರೆ. ಕೂಡಲೇ ಈ ಎಲ್ಲಾ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಅಧಿಕಾರಿಗಳನ್ನು ನೇಮಿಸಿದರೆ ಸಂಸ್ಥೆಯಲ್ಲಿನ ಭ್ರಷ್ಟಾಚಾರಗಳು ನಿಲ್ಲಲಿವೆ ಎಂದು ಹೇಳಿದರು.
ನ್ಯಾಯಾಲಯಗಳು ಹಾಗೂ ಸರ್ಕಾರ ರೂಪಿಸಿರುವ ಕಾಯಿದೆಯ ಸಂಪೂರ್ಣ ಉಲ್ಲಂಘನೆ ಆಗುತ್ತಿದೆ. ಮುಂದಿನ ದಿವಸಗಳಲ್ಲಿ ನಾಗರಿಕರೆಲ್ಲರೂ ಒಟ್ಟಾಗಿ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿಸಲು ಹೋರಾಟ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ಹಸಿರು ದಳದ ಚಿನ್ಮಯಿ , ಎಚ್ಎಸ್ಆರ್ ಬಡಾವಣೆ ಕಸ ಸಂಗ್ರಹಣ ಹೋರಾಟದ ಶಾಂತಿ ಸೇರಿದಂತೆ, ಪಕ್ಷದ ಮುಖಂಡರುಗಳಾದ ಜಗದೀಶ್ ವಿ. ಸದಂ, ಬಸವರಾಜ ಮುದಿಗೌಡರ್, ಉಷಾ ಮೋಹನ್, ನವೀನ್ ಅಯ್ಯರ್, ಜಗದೀಶ್ ಚಂದ್ರ, ಪುಟ್ಟಣ್ಣ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
