ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿರುವ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮಕ್ಕಳು ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶಾಲೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಬಡಾವಣೆಗೆ ಆಗಮಿಸಿದ ಗೋವುಗಳಿಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಗೋಗ್ರಾಸ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿದರು. ಮಕ್ಕಳ ಭಕ್ತಿಪೂರ್ವಕ ಪ್ರಾರ್ಥನೆಯನ್ನು ಗೋವುಗಳು ಆಲಿಸಿದವು.
ಮಕ್ಕಳ ಈ ವಿಶಿಷ್ಟ ಆಚರಣೆ ಬಡಾವಣೆಯ ನಿವಾಸಿಗಳು ಹಾಗೂ ಪೋಷಕರಲ್ಲಿ ಹೆಮ್ಮೆಯನ್ನು ಮೂಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೃಥು ಪಿ. ಅದ್ವೈತ್, ಕೃಷ್ಣನ ಅವತಾರಕ್ಕೆ ಗೋಮಾತೆಯಾದ ಕಾಮಧೇನುವಿನ ಪ್ರಾರ್ಥನೆಯೂ ಕಾರಣವಾಗಿತ್ತು ಎಂಬ ಪೌರಾಣಿಕ ಹಿನ್ನೆಲೆಯನ್ನು ತಿಳಿಸಿ, ಶ್ರೀಕೃಷ್ಣನು ಲೋಕಕ್ಕೆ ನೀಡಿದ ಭಗವದ್ಗೀತೆಯನ್ನು ಪ್ರತಿಯೊಬ್ಬರೂ ಓದಿ ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೆಂಕಟರಾಘವ ಅವರು ಗೋವುಗಳ ರಕ್ಷಣೆಯ ಅಗತ್ಯವನ್ನು ತಿಳಿಸಿದರು. ಧನ್ವಿನ್ ಶೇಖರ್ ಅವರು ಶ್ರೀಕೃಷ್ಣನು ಜಗತ್ತಿಗೆ ಗುರುವಾಗಿದ್ದು, ಆತನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕರಣ್ ಕೀರ್ತಿ ಅವರು ನಮಗೆಲ್ಲ ಶ್ರೀಕೃಷ್ಣನೆಂದರೆ ತುಂಬಾ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದರು. ಬಡಾವಣೆಯ ಪುಟಾಣಿ ಬಾಲಕಿ ಮಹಿಶ್ರೀ ‘ಹರೇ ರಾಮ, ಹರೇ ಕೃಷ್ಣ’ ಜಪಿಸುವ ಮೂಲಕ ಗಮನ ಸೆಳೆದಳು.
ಶಾಲೆಯ ವಿವಿಧ ತರಗತಿಗಳ ವಿದ್ಯಾರ್ಥಿಗಳಾದ ಪೃಥು ಪಿ. ಅದ್ವೈತ್, ವೆಂಕಟರಾಘವ, ಕರಣ್ ಕೀರ್ತಿ, ಮೋಹಿತಾ ಹಾಗೂ ಧನ್ವಿನ್ ಶೇಖರ್ ಸೇರಿದಂತೆ ವಿದ್ಯಾರ್ಥಿಗಳು ಗೋಮಾತೆಗೆ ಗೋಗ್ರಾಸ ಅರ್ಪಿಸಿ ಕೃಷ್ಣ ಜನ್ಮಾಷ್ಟಮಿಯ ಆಚರಣೆಯಲ್ಲಿ ಪಾಲ್ಗೊಂಡರು.
ಈ ವಿಶಿಷ್ಟ ಆಚರಣೆಯ ಮುಂದಾಳತ್ವವನ್ನು ಪೃಥು ಪಿ. ಅದ್ವೈತ್ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಶುಭಾ ಅರುಣ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಮೈಸೂರು ಜಿಲ್ಲಾ ಅಧ್ಯಕ್ಷ ಪುನೀತ್ ಜಿ. ಕೂಡ್ಲೂರು, ಬಡಾವಣೆಯ ಕಾರ್ಯದರ್ಶಿ ನಾಗಭೂಷಣ ಆಚಾರಿ, ಉಪಾಧ್ಯಕ್ಷ ರಾಮಕೃಷ್ಣ, ಅಧ್ಯಕ್ಷ ಕೆ.ಆರ್. ಗಣೇಶ್, ಪುಟ್ಟರಾಜು, ಶ್ರೀಕಂಠ ಶೆಟ್ಟಿ, ನಾಗಶ್ಯಾಮಲ, ವರಲಕ್ಷ್ಮಿ ಸೇರಿದಂತೆ ನಿವಾಸಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
