ಮೈಸೂರು: ಮಾನವ ಅಕ್ರಮ ಸಾಗಣೆಯು ವ್ಯಕ್ತಿಯ ಘನತೆ, ದೈಹಿಕ ಸ್ವಾಸ್ಥ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ಆಕ್ರಮಣವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಉಷಾರಾಣಿ ಹೇಳಿದರು.
ಸಂತ್ರಸ್ತರ ಪುನರ್ವಸತಿ ಕೇವಲ ಸರ್ಕಾರದ ನೀತಿಯಲ್ಲ, ಅದು ಸಂವಿಧಾನದ 21ನೇ ವಿಧಿಯಡಿ ಘನತೆಯುಳ್ಳ ಜೀವನದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಹಾಗೂ ಉದಯ ಹೆಜ್ಜೆ ವಿಮೋಚಿತ ಜೀತ ಕಾರ್ಮಿಕರ ಒಕ್ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯು 2013ರಿಂದ ಜುಲೈ 30ನ್ನು ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವಾಗಿ ಆಚರಿಸುತ್ತಿದ್ದು, ಇದು ಆಚರಣೆ ಮಾತ್ರವಲ್ಲ ಆತ್ಮಾವಲೋಕನದ ದಿನ. ಈ ವರ್ಷದ ಧ್ಯೇಯವಾಕ್ಯ “Trapped Behind The Scam” ಆಗಿದ್ದು, ಆನ್ಲೈನ್ ಸೈಬರ್ ಅಪರಾಧ ಮತ್ತು ವಂಚನೆ ಮೂಲಕ ನಡೆಯುವ ಕಳ್ಳಸಾಗಣೆ ಜಾಲಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಸೋಸಲೆ ಹೋಬಳಿಯ ದೇವನಹಳ್ಳಿ ಇಟ್ಟಿಗೆ ಗೂಡುಗಳ ಮೇಲೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಕಂದಾಯ ಇಲಾಖೆ ಮತ್ತು ಎನ್ ಜಿ ಒ ಗಳ ಜಂಟಿ ದಾಳಿಯಲ್ಲಿ 18 ಹಿರಿಯರು ಮತ್ತು 7 ಮಕ್ಕಳನ್ನು ರಕ್ಷಿಸಿ ಬಿಡುಗಡೆ ಪ್ರಮಾಣಪತ್ರ ನೀಡಲಾಗಿದೆ. ಶೇ.60ಕ್ಕಿಂತ ಹೆಚ್ಚು ಸಂತ್ರಸ್ತರು ಮಹಿಳೆಯರು ಮತ್ತು 18 ವರ್ಷದೊಳಗಿನ ಮಕ್ಕಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅಪರಾಧಿಗಳಿಗೆ 10 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನುಗಳಿವೆ ಎಂದು ಉಷಾರಾಣಿ ತಿಳಿಸಿದರು.
ವಿಕಾಸ ಸಂಸ್ಥೆಯ ಅಧ್ಯಕ್ಷ ವರ್ಗಿಸ್ ಕ್ಲೀಟಸ್ ಮಾತನಾಡಿ, ಜೀತಪದ್ಧತಿ ಕೇವಲ ಸರಪಳಿ ಬಂಧನವಲ್ಲ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಬರುವ ಬಡ ಕಾರ್ಮಿಕರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಶೋಷಿಸಲಾಗುತ್ತಿದೆ. ಮೈಸೂರು, ಚಿಕ್ಕಮಗಳೂರು, ಮಂಡ್ಯ, ಕೊಡಗು, ಉತ್ತರ ಕನ್ನಡದ ಕಾಫಿ ತೋಟ, ಕ್ವಾರಿ, ಕಬ್ಬು ಕಡಿಯುವ ಕ್ಷೇತ್ರಗಳಲ್ಲಿ ಶೋಷಣೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
1976ರ ಜೀತಪದ್ಧತಿ ರದ್ದತಿ ಕಾಯ್ದೆಯಡಿ 23 ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. 2019ರಲ್ಲಿ ಆರಂಭವಾದ ಉದಯೋನ್ಮುಖ ಒಕ್ಕೂಟ ಈಗಾಗಲೇ 150ಕ್ಕೂ ಹೆಚ್ಚು ಜೀತದಾಳುಗಳನ್ನು ಮುಕ್ತಗೊಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕಾರ್ಮಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡು, ಮುಂಗಡ ಹಣ ಪಡೆದಿದ್ದೆ,ಅದು ನನ್ನನ್ನು ಜೀತಕ್ಕೆ ತಳ್ಳಿತು. ಹೊಳೆನರಸೀಪುರ, ನಂಜನಗೂಡು, ಚನ್ನಪಟ್ಟಣದಲ್ಲಿ ಬೆಳಗ್ಗೆ 6ರಿಂದ ಸಂಜೆ 6.30ರವರೆಗೆ ದುಡಿಸಿಕೊಂಡು ವಾರಕ್ಕೆ 800-1000 ರೂ. ಮಾತ್ರ ನೀಡುತ್ತಿದ್ದರು. ಕಾಲುವೆ ನೀರು ಸೋಸಿ ಕುಡಿಯುವ ಸ್ಥಿತಿ ಇತ್ತು. ಮಾಲೀಕರು ಬಡ್ಡಿ ಸೇರಿಸಿ ಎಂದೂ ತೀರದ ಸಾಲದ ಲೆಕ್ಕ ತೋರಿಸುತ್ತಿದ್ದರು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು ಆರ್ ಅವರು ಮಾತನಾಡಿ, ಸರ್ಕಾರ ಮತ್ತು ಎನ್ ಜಿಒಗಳು ನಾಣ್ಯದ ಎರಡು ಮುಖಗಳಂತೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಎಸ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರವಿಚಂದ್ರ, ಎಸಿಪಿ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.
