ಬೆಂಗಳೂರು: ರಾಜ್ಯಪಾಲರ ಅಂಕಿತ ಬೀಳದೆ, ರಾಜ್ಯ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳದೆ ಒಂದು ಮಸೂದೆ ಕಾನೂನಾಗುವುದಿಲ್ಲ ಎಂಬ ಕನಿಷ್ಠ ಜ್ಞಾನ ಸ್ವಯಂಘೋಷಿತ ಸಂವಿಧಾನ ತಜ್ಞರು, ವಕೀಲರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಇನ್ನೂ ಅಧಿಕೃತವಾಗಿ ಜಾರಿಯೇ ಆಗದ ಒಂದು ಮಸೂದೆಯನ್ನು ಉಲ್ಲೇಖಿಸಿ ಪೊಲೀಸರು ವಿಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಾರೆ ಎಂದರೆ ರಾಜ್ಯದಲ್ಲಿ ಪೊಲೀಸ್ ಕಚೇರಿಗಳು ಹೇಗೆ ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಟ್ವೀಟ್ ಮಾಡಿ ಅಶೋಕ್ ಹೇಳಿದ್ದಾರೆ.
ಕೇಸರಿ, ಕುಂಕುಮ ಎಂದರೆ ದ್ವೇಷ ಕಾರುವ ಕಾಂಗ್ರೆಸ್ ಪಕ್ಷ, ಹಿಂದೂಗಳ, ಹಿಂದೂ ಧರ್ಮದ ಬಗ್ಗೆ ಎಷ್ಟು ಪೂರ್ವಗ್ರಹ ಪೀಡಿತವಾಗಿದೆ ಎಂದರೆ ರಾಜ್ಯದಲ್ಲಿ ಮುಕ್ತವಾಗಿ ಗಣೇಶ ವಿಸರ್ಜನೆ ಮೆರವಣಿಗೆ ಮಾಡುವುದು ತಪ್ಪು, ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ಮಾಡುವುದೂ ತಪ್ಪು ಎಂಬಂತಹ ಪರಿಸ್ಥಿತಿ ತಂದಿಟ್ಟಿದೆ ಎಂದು ಟೀಕಿಸಿದ್ದಾರೆ.
ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಸ್ವಾಭಿಮಾನಿ ಕನ್ನಡಿಗರು ಕಿತ್ತೊಗೆಯುವ ದಿನ ಬಹಳ ದೂರವಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
