ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಜ.8 ರಂದು ಶುಕ್ರವಾರ ಮೂವರು ಮಹಾನ್ ವಾಗ್ಗೇಯಕಾರರ ಆರಾಧನಾ ಮಹೋತ್ಸವವನ್ನು ಭಕ್ತಿಯಿಂದ ಆಚರಿಸಲಾಯಿತು.
ಕುಲಪತಿ ಪ್ರೊ ನಾಗೇಶ್ ವಿ ಬೆಟ್ಟಕೋಟಿ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಮೂವರು ಮಹಾನ್ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು ಪುರಂದರದಾಸರು ಹಾಗೂ ಕನಕದಾಸರ ಆರಾಧನಾ ಮಹೋತ್ಸವವನ್ನು ಭಾವ ಸಂಗೀತ, ಸಂಭ್ರಮ ಮತ್ತು ಶಿಸ್ತಿನೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಸರ್ದಾರ್ ವಲ್ಲಭಬಾಯಿ ಪಟೇಲನಗರ ನಾಡನಹಳ್ಳಿಯ ವಿವಿಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದ್ವಾನ್ ಎಚ್ ಎಲ್ ಶಿವಶಂಕರ ಸ್ವಾಮಿ ಅವರು ಆಗಮಿಸಿದ್ದರು. ನಂತರ ಎಲ್ಲರೂ ಮಹಾನ್ ಸಾಧಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಎಂ.ಜಿ ಮಂಜುನಾಥ್ ಅವರು ಮಾತನಾಡಿ, ತ್ಯಾಗರಾಜರ ಸಂಗೀತ ಹಾಗೂ ಭಕ್ತಿ ಪರಂಪರೆಯ ಮಹತ್ವವನ್ನು ಕೇವಲ ಸಂಗೀತ ರಚನೆಗಳಲ್ಲ, ಅವು ಮಾನವ ಜೀವನಕ್ಕೆ ಮಾರ್ಗದರ್ಶಕವಾದ ಭಕ್ತಿಯ ಸಂದೇಶಗಳು ಎಂದು ತಿಳಿಸಿದರು.
ಒಂದು ಸಂಸ್ಥೆಯ ಏಳಿಗೆಗೆ ಪ್ರಬಲ ನಾಯಕತ್ವ ಎಷ್ಟು ಮುಖ್ಯವೋ ಕಲೆಗೆ ಪ್ರೋತ್ಸಾಹವು ಅಷ್ಟೇ ಮುಖ್ಯ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಆಧಾರ ಸ್ಥಂಬದಂತಿರುವ ಕಲೆ ಮತ್ತು ಕಲಾವಿದರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಕುಲಪತಿಗಳಾದ ನಾಗೇಶ್ ವಿ. ಬೆಟ್ಟಕೋಟೆಯವರು ತ್ಯಾಗರಾಜರ ಕೃತಿಗಳಲ್ಲಿ ಅಡಗಿರುವ ನಾದ ಯೋಗ ಮತ್ತು ಭಕ್ತಿ ತತ್ವ, ಪುರಂದರದಾಸರ ಸಂಗೀತ ಶಿಕ್ಷಣದ ಮಹತ್ವ ಹಾಗೂ ಕನಕದಾಸರ ಸಾಮಾಜಿಕ ಸಮಾನತೆಯ ಸಂದೇಶಗಳ ಕುರಿತು ಹೇಳಿದರು.
ಈ ಮೂವರು ವಾಗ್ಗೇಯಕಾರರು ಭಾರತೀಯ ಸಂಗೀತ ಹಾಗೂ ಸಂಸ್ಕೃತಿಗೆ ನೀಡಿದ ಅಮೂಲ್ಯ ಕೊಡುಗೆ ಇಂದಿಗೂ ಪ್ರಾಸಂಗಿಕವಾಗಿದೆ ಎಂದು ಅಭಿಪ್ರಾಯಪಟ್ಟರು.
