ಮೈಸೂರು: ಸೌಲಭ್ಯ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಮೀಸಲಾಗಿರುವ ಸಮರ್ಥನಂ ಜೀವನೋಪಾಯ ಸಂಪನ್ಮೂಲ ಕೇಂದ್ರ (LRC)ವು ಮಹಿಳೆಯರಿಗೆ ಉಚಿತ ಕಂಪ್ಯೂಟರ್ ಮತ್ತು ಇಂಗ್ಲಿಷ್ ಸಂವಹನ ಕೌಶಲ್ಯ ಅಭಿವೃದ್ಧಿ ಕೋರ್ಸ್ನ 3 ನೆ ಬ್ಯಾಚ್ ಪ್ರಾರಂಭಿಸಿದೆ.
ಮೈಸೂರಿನ ಅಗ್ರಹಾರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರದಲ್ಲಿ ಸೌಲಭ್ಯ ವಂಚಿತ ಮಹಿಳೆಯರಿಗಾಗಿ (18-35 ವರ್ಷ ವಯಸ್ಸಿನವರಿಗೆ) ಈ ಉಚಿತ ಕೋರ್ಸ್ ಪ್ರಾರಂಭವಾಗಿದೆ.
ಬ್ಯಾಚ್ -3 ಉದ್ಘಾಟನೆಯನ್ನು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಗೋವಿಂದ ರಾಜು ಮತ್ತು ಸಮರ್ಥನಂ ಟ್ರಸ್ಟ್ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ನೆರವೇರಿಸಿದರು.
ಈ ವೇಳೆ ಗೋವಿಂದರಾಜು ಅವರು ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಅತ್ಯಗತ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಿ ಕೆಲಸ ಮಾಡಬೇಕಾದರೆ ಅವರ ಆಸಕ್ತಿಗಳು ತಿಳಿದುಕೊಂಡು ಪ್ರೋತ್ಸಾಹಿಸುವ ಅಗತ್ಯವಿದೆ ಇತರರಿಗೆ ಮಾದರಿಯಾಗುವಂತೆ ಸಾಧನೆ ಮಾಡಬೇಕು ಎಂದು ಗೋವಿಂದರಾಜು ಸಲಹೆ ನೀಡಿದರು
ಶಿವರಾಜು ಅವರು ಸಮರ್ಥನಂ ಟ್ರಸ್ಟ್ನ ಧ್ಯೇಯ ಮತ್ತು ದೃಷ್ಟಿಕೋನ ಮತ್ತು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಅವಕಾಶಗಳನ್ನು ಒದಗಿಸುವ ಬದ್ಧತೆ ಹೊಂದಿದೆ ಎಂದು ತಿಳಿಸಿದರು
ಪ್ರತಿ ವಿದ್ಯಾರ್ಥಿಗೆ ಸಮಗ್ರ ಸ್ವಾಗತ ಕಿಟ್ ವಿತರಿಸಲಾಯಿತು, ಈ ಕಿಟ್ ನಲ್ಲಿ ವೈಲ್ಡ್ಕ್ರಾಫ್ಟ್ ಬ್ಯಾಗ್, ಅಧ್ಯಯನ ಸಾಮಗ್ರಿಗಳು, ನೋಟ್ಬುಕ್, ಪೆನ್, ಇಂಗ್ಲಿಷ್ ಮತ್ತು ಕಂಪ್ಯೂಟರ್ಗಳ ಕುರಿತಾದ ಪಠ್ಯಪುಸ್ತಕಗಳು ಇವೆ.
ಕಾರ್ಯಕ್ರಮದಲ್ಲಿ ಮಹಾಂತೇಶ್ (ಸಂಯೋಜಕರು), ಸ್ಪರ್ಶ (ಕಂಪ್ಯೂಟರ್ ಶಿಕ್ಷಕ), ಭುವನಾ (ಇಂಗ್ಲಿಷ್ ಶಿಕ್ಷಕ), ಶರೀಫ್ ಮತ್ತು ಸಮರ್ಥನಂ LRC ಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಹೆಚ್ಚಿನ ಮಾಹಿತಿಗಳಿಗೆ ಮೊಬೈಲ್ 9113806615, 6364867818 ಸಂಪರ್ಕಿಸಬಹುದಾಗಿದೆ.
