ಮೈಸೂರು: ಮೈಸೂರು ನಗರ ಮತ್ತು ತಾಲೂಕಿನ ಪೊಲೀಸ್ ಠಾಣೆ, ಸರ್ಕಾರಿ ಶಾಲೆಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಜಯ ಕರ್ನಾಟಕ ಮೈಸೂರು ನಗರ ಅಧ್ಯಕ್ಷರಾದ ಹರ್ಷ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು ಮನವಿ ಸಲ್ಲಿಸಿದ್ದಾರೆ.
ನಗರ ಮತ್ತು ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಜನರು ದಿನನಿತ್ಯ ಅಲೆದಾಡುವಂತಾಗಿದೆ ಆಡಳಿತದ ಕಾರ್ಯಕ್ಷಮತೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹರ್ಷ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಅಗತ್ಯ ಸಂಖ್ಯೆಯ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ, ಸಂಚಾರ ನಿಯಂತ್ರಣ ಮುಂತಾದ
ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತೊಂದರೆಯಾಗುತ್ತಿದೆ ಎಲ್ಲ ಅವರು ಹೇಳಿದ್ದಾರೆ.
ಈ ಪರಿಸ್ಥಿತಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಶಿಕ್ಷಕರ ಹುದ್ದೆ ದೀರ್ಘಕಾಲದಿಂದ ಖಾಲಿ ಇವೆ. ಇದರಿಂದ ಶಾಲೆಗಳ ಆಡಳಿತಾತ್ಮಕ ಕಾರ್ಯ, ಶೈಕ್ಷಣಿಕ ಯೋಜನೆಗಳ ಅನುಷ್ಠಾನ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಶಿಕ್ಷಣದ ಗುಣಮಟ್ಟ ಕಾಪಾಡಲು ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಹರ್ಷ
ಆಗ್ರಹಿಸಿದ್ದಾರೆ,
ಕಂದಾಯ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಸಮಾಜ ಕಲ್ಯಾಣ, ಕೃಷಿ, ಅರೋಗ್ಯ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿದೆ.
ಇದರಿಂದ ಜಾತಿ, ಅದಾಯ, ವಾಸಸ್ಥಳ ಪ್ರಮಾಣಪತ್ರ, ಪಿಂಚಣಿ, ವಿವಿಧ ಯೋಜನೆಗಳ ಅರ್ಜಿಗಳ ವಿಲೇವಾರಿ ಸೇರಿದಂತೆ ಸಾರ್ವಜನಿಕ ಸೇವೆ ವಿಳಂಬವಾಗುತ್ತಿವೆ. ಜನರು ಅನಗತ್ಯವಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಸರ್ಕಾರದ ಗಮನ ಸೆಳೆದು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹರ್ಷ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
