ಮೈಸೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಮೈಸೂರಿನ ಡಿಡಿಪಿಐ ಕಚೇರಿಯ ಎಫ್ಡಿಎಗೆ ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.
ಮೈಸೂರು ಎಸಿಬಿ ಪೊಲೀಸ್ ಠಾಣೆಯಲ್ಲಿ 18-6-2018 ರಂದು ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಅಧಿಕಾರಿಗಳು ದೋಷಾರೋಪಣ ಪತ್ರವನ್ನು ಮೈಸೂರಿನ ಜಿಲ್ಲಾ 3ನೇ ಅಧಿಕ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ಆರೋಪಿ ಡಿಡಿಪಿಐ ಕಚೇರಿಯ
ಎಫ್ಡಿಎ ಕೆ. ಕೆಂಪೇಗೌಡ (52) ಅವರಿಗೆ ಶಿಕ್ಷೆ ವಿಧಿಸಿದೆ.
ಲಂಚದ ಹಣ ಬೇಡಿಕೆ ಪ್ರಕರಣದಲ್ಲಿ 3 ವರ್ಷ ಕಠಿಣ ಕಾರಾಗೃಹ ಹಾಗೂ 10,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಇದಲ್ಲದೆ, ಲಂಚ ಸ್ವೀಕಾರ ಪ್ರಕರಣದಲ್ಲಿ 4 ವರ್ಷ ಕಠಿಣ ಕಾರಾಗೃಹ ಹಾಗೂ 10,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.
