ಬೆಳಗಾವಿ: ವಾ.ಕ.ರ.ಸಾ.ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂಬ ಹೆಸರಿಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದರು.
ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನಮಟ್ಟ ಸುಧಾರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ವಾ.ಕ.ರ.ಸಾ.ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ, ನೂತನ ಬಸ್ಸುಗಳ ಲೋಕಾರ್ಪಣೆ, ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿ ಶಂಕುಸ್ಥಾಪನೆ ಮತ್ತಿತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಎರಡು ಸಾವಿರ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ವಾಕರಸಾ ಸಂಸ್ಥೆಗೆ 700 ವಾಹನಗಳ ಪೈಕಿ ಈಗ 250 ಬಸ್ ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿ ಒಂದನೇ ಘಟಕದ ನವೀಕರಣ ಕಾಮಗಾರಿಗೆ ಅಂದಾಜು ಒಂದು ಕೋಟಿ ಕಾಮಗಾರಿಗೆ ಇಂದು ಶಂಕು ಸ್ಥಾಪನೆ ನೆರವೆರಿಸಲಾಗಿದೆ.
ಪಿಎಮ್ ಇ ಬಸ್ ಸೇವಾ ಯೋಜನೆ ಅಡಿ ಬೆಳಗಾವಿ ನಗರಕ್ಕೆ ನೂರು ವಾಹನಗಳು ಮಂಜೂರಾಗಿದ್ದು, ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಐದು ಕೋಟಿ ವೆಚ್ಚದಲ್ಲಿ 11 ನಗರ ಸಾರಿಗೆ ಹೊಸ ವಾಹನಗಳನ್ನು ಖರೀದಿಸಿ ಸಾರ್ವಜನಿಕ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಅಂದಾಜು ಎಂಟು ಕೋಟಿ ರೂ ವೆಚ್ಚದಲ್ಲಿ ಹದಿನಾಲ್ಕು ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಅಂದಾಜು ನಾಲ್ಕು ಕೋಟಿ ವೆಚ್ಚದಲ್ಲಿ ಹತ್ತು ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಒಟ್ಟು ಇಪ್ಪತ್ತನಾಲ್ಕು ವಾಹನಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬೆಳಗಾವಿ ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿದ್ದು ಕ್ರಮೇಣ ಈ ಭಾಗಕ್ಕೆ ಹೆಚ್ವುವರಿ ಹೊಸ ಬಸಗಳನ್ನು ಒದಗಿಸುವುದರ ಜೊತೆಗೆ ಶೀಘ್ರದಲ್ಲಿಯೇ ನಗರ ಸಾರಿಗೆಗೆ ಎಂಭತ್ತು ಹೊಸ ಬಸಗಳನ್ನು ನೀಡುವುದಾಗಿ ಭರವಸೆ ನೀಡಿದರು.
ನಮ್ಮ ಸರಕಾರದ ಅವಧಿಯಲ್ಲಿ ಅನುಕಂಪದ ಆಧಾರದ ಮೇಲೆ ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಕಾರ್ಯನಿರ್ವಹಣೆ ಅವಧಿಯಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಒಂದು ಕೋಟಿ ರೂ ಪರಿಹಾರ ಮೊತ್ತ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಇಂದು ಈಡೇರಿದಂತಾಗಿದೆ. ವಾ.ಕ.ರ.ಸಾ.ಸಂಸ್ಥೆಗೆ 250 ಹೊಸ ಬಸ್ಗಳನ್ನು ನೀಡಲಾಗಿದ್ದು, ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ ಜನರ ಸೇವೆಗೆ ಸದಾ ಸಿದ್ಧರಾಗಿರುವ ಹಗಲು ರಾತ್ರಿ ಶ್ರಮ ವಹಿಸುವ ಸಾರಿಗೆ ಇಲಾಖೆ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರಿಗೆ ಸಚಿವರು ತಮ್ಮ ಅಧಿಕಾರ ಅವಧಿಯಲ್ಲಿ ಇಲಾಖೆಗೆ ಕಾಯಕಲ್ಪ ನೀಡುವುದರ ಮೂಲಕ ಅನೇಕ ಬದಲಾವಣೆಗಳನ್ನು ತಂದಿದ್ದಾರೆ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರಕ್ಕೆ ಸುಸ್ಥಿತಿಯಲ್ಲಿರುವ ಬಸಗಳನ್ನು ಒದಗಿಸಲು ಹೆಬ್ಬಾಳಕರ್ ಮನವಿ ಮಾಡಿದರು.
ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷರಾದ ಭರಮಗೌಡ (ರಾಜು) ಕಾಗೆ ಅವರು ಮಾತನಾಡಿ ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿಗೆ ವಿದ್ಯುತ್ ಚಾಲಿತ ಹೊಸಬಸ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಶಾಸಕರಾದ ಆಸೀಫ್(ರಾಜು) ಸೇಠ್
ಬೆಳಗಾವಿ ನಗರ ಪ್ರದೇಶಕ್ಕೆ ಇನ್ನೂ ಹೆಚ್ಚಿನ ಬಸಗಳನ್ನು ಒದಗಿಸಲು ಕೋರಿದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಬಾಬಸಾಹೇಬ ಪಾಟೀಲ, ವಿಠ್ಠಲ್ ಹಲಗೇಕರ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ,
ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷರಾದ ಸುನೀಲ ಹಣಮನ್ನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಪೋಲಿಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂಧೆ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.
