ಬಿಳಿಕೆರೆ: ಸಾಹಿತ್ಯವನ್ನು ಓದುವುದರ ಮೂಲಕ ಇಂಗ್ಲೀಷ್ ಭಾಷೆ ಕಲಿಯುವುದು ಅತಿ ಸುಲಭ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ,ಸಹ ಪ್ರಾಧ್ಯಾಪಕ ಗೋವಿಂದರಾಜು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರು ಜಿಲ್ಲೆ, ಬಿಳಿಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಜಂಟಿಯಾಗಿ ಆಯೋಜಿಸಿದ್ದ, ಸಾಹಿತ್ಯದ ಮೂಲಕ ಇಂಗ್ಲಿಷ್ ಭಾಷೆ ಕಲಿಕೆ: ಆರ್ ಕೆ ನಾರಾಯಣ್ ಅವರ ಕಾದಂಬರಿಗಳನ್ನು ಓದುವುದರೊಂದಿಗೆ, ಎಂಬ ವಿಷಯದ ಕುರಿತು ಒಂದು ದಿನದ ಇಂಗ್ಲಿಷ್ ಭಾಷೆ ಕಲಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಯಾವುದೇ ಸಾಹಿತ್ಯ ಒಂದು ಪ್ರದೇಶದ ಜನ, ಸಂಸ್ಕೃತಿ ಮತ್ತು ಆಶಯಗಳನ್ನು ಒಳಗೊಂಡಿರುತ್ತದೆ. ಇವು ಪ್ರತಿಯೊಬ್ಬರಿಗೂ ಮಾನವಾಸಕ್ತಿ ವಿಷಯಗಳು,ಹಾಗಾಗಿ ಈ ವಿಷಯಗಳನ್ನು ತಿಳಿಯುವ ಹಂಬಲ ಓದುಗನಿಗೆ ಉಂಟಾಗುತ್ತದೆ. ಈ ಆಸಕ್ತಿಯು ಭಾಷೆಯನ್ನು ಕಲಿಯಲು ಸಹಕಾರ ನೀಡುತ್ತದೆ. ಹಾಗಾಗಿ ನಿಜವಾಗಿ ಸಾಹಿತ್ಯವು ಭಾಷೆಯನ್ನು ಕಲಿಯಲು ಸಂಪೂರ್ಣ ಸಹಕಾರಿ ಎಂದು ಹೇಳಿದರು.
ಕನ್ನಡದಂತೆಯೇ ಇಂಗ್ಲಿಷ್ ಕೂಡ ಒಂದು ಭಾಷೆ.ಅದು ಕಷ್ಟವೇನಲ್ಲ. ಆದರೆ, ಮನಸ್ಸು ಮಾಡಬೇಕು. ಯಾವುದೇ ಭಾಷೆ ಕಲಿಯುವ ಮೊದಲು ಕಷ್ಟ.ಆದರೆ ಕಲಿಯಲು ಪ್ರಯತ್ನ ಪಟ್ಟರೆ ಅದು ಅಸಾಧ್ಯವಲ್ಲ. ಪದವಿ ಓದುವ ಅಥವಾ ನೌಕರಿ ಗಳಿಸ ಬಯಸುವ ಯಾವುದೇ ಅಭ್ಯರ್ಥಿಯು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯುವ ಅಗತ್ಯ ಇದೆ ಎಂದು ಅವರು ಒತ್ತಿ ಹೇಳಿದರು.
ಕವನ, ಕಥೆ,ಕಾದಂಬರಿ, ಸಣ್ಣ ಕಥೆಗಳು,ಆತ್ಮಕಥೆಗಳು ಅಥವಾ ಯಾವುದೇ ಸಾಹಿತ್ಯ ಪ್ರಕಾರವು ಓದುಗರಿಗೆ ಇಷ್ಟವಾಗುತ್ತದೆ. ಇವುಗಳನ್ನು ಓದುತ್ತಾ ಒಂದು ಸಂಸ್ಕೃತಿಯನ್ನ ಮತ್ತು ಜನಜೀವನ, ಅಲ್ಲಿನ ವ್ಯವಸ್ಥೆ ಇನ್ನಿತರ ಸಂಬಂಧಿತ ವಿಷಯಗಳನ್ನು ಅರಿಯುತ್ತೇವೆ. ಹಾಗಾಗಿ ಸಾಹಿತ್ಯವು ಕೇವಲ ಭಾಷೆಯನ್ನು ಕಲಿಸುವುದಲ್ಲದೆ, ಜೀವನದ ಸಮಗ್ರ ತಿರುಳನ್ನು ಉಣಬಡಿಸುತ್ತದೆ. ಇದು ಬಹು ವಿಷಯಗಳನ್ನು ಅರಿಯಲು ಸಹಕಾರಿಯಾಗುತ್ತದೆ. ಹಾಗಾಗಿ, ಸಾಹಿತ್ಯವನ್ನು ಓದುವುದು ಬಹುಪಯೋಗಿ ಎಂದು ಗೋವಿಂದಾಜು ತಿಳಿಸಿದರು.
ಇಂದಿನ ಉದ್ಯೋಗ ಕೇಂದ್ರಿತ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಗಳಿಸಲು ಇಂಗ್ಲಿಷ್ ಅತಿ ಮುಖ್ಯವಾದ ಅಗತ್ಯಗಳಲ್ಲಿ ಒಂದಾಗಿದೆ. ಅದರ ಸಲುವಾಗಿ ಬೇರೆ ವಿಷಯಗಳ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಹೊಂದುವುದು ತುರ್ತಾಗಿ ಆಗಬೇಕಿದೆ.ಆದ್ದರಿಂದ ಇಂಗ್ಲಿಷ್ ಅನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ರಮೇಶ್ ಎಂ. ಕೆ ಮಾತನಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಾಕಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಜಯಲಕ್ಷ್ಮೀ ಬಿ ಸ್ವಾಗತಿಸಿದರು.ದ್ವಿತೀಯ ಬಿಎ ವಿದ್ಯಾರ್ಥಿ
ಸಿದ್ದರಾಜು, ಕಾರ್ಯಕ್ರಮದ ನಿರೂಪಣೆ ಮಾಡಿದರು, ತೃತೀಯ ಬಿಕಾಂ ವಿದ್ಯಾರ್ಥಿನಿ
ಹರ್ಷಿತ ವಂದಿಸಿದರು.
ಅಧ್ಯಾಪಕರಾದ ಡಾ.ರತ್ನ ಎನ್., ವಸಂತದೇವಿ ಎಚ್. ಕೆ., ಡಾ. ಪ್ರಸನ್ನ ಎನ್, ಅತಿಥಿ ಉಪನ್ಯಾಸಕರು, ಅಧ್ಯಾಪಕೇತರರು ಹಾಗು ಸಿಡಿಸಿ ಸಿಬ್ಬಂದಿ ಹಾಜರಿದ್ದರು.
