ಮೈಸೂರು: ಆರೋಗ್ಯಕರ ಮತ್ತು ಮಾದಕ ದ್ರವ್ಯ ಮುಕ್ತ ಜೀವನಶೈಲಿಯನ್ನು ಉತ್ತೇಜಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಮೈಸೂರಿನ ಅಗ್ರಹಾರ ವೃತ್ತದಲ್ಲಿ ನಶೆ ಮುಕ್ತ ಮೈಸೂರು ನಿರ್ಮಾಣಕ್ಕಾಗಿ ನಾಳೆ ಕನ್ನಡ ಸಂಘಟನೆಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿವೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರ ನೇತೃತ್ವದಲ್ಲಿ ಈ ಕುರಿತು ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಯಿತು.
ಮಾದಕ ದ್ರವ್ಯಗಳನ್ನು ಬೇರು ಸಮೇತ ಕಿತ್ತು ಹಾಕುವುದು, ಮಾದಕ ವಸ್ತುಗಳ ದುರುಪಯೋಗದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವ್ಯಸನ ಮುಕ್ತ ಜೀವನವನ್ನು ನಡೆಸಲು ಯುವಕರನ್ನು ಪ್ರೇರೇಪಿಸುವ ಗುರಿಯನ್ನು ಇಟ್ಟುಕೊಂಡು ಈ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಸಂಘಟನೆಯವರು ತಿಳಿಸಿದರು.
ಮಾದಕ ವಸ್ತುಗಳ ಬಳಕೆ ವಿರುದ್ಧ ವಿವಿಧ ಭಿತ್ತಿ ಚಿತ್ರಗಳ ಪ್ರದರ್ಶನ , ಜಾಗೃತಿ ಮಾತುಕತೆಗಳು ಮತ್ತು ಕ್ಷೇತ್ರದ ತಜ್ಞರೊಂದಿಗೆ ಸಂವಾದಗಳನ್ನು ಒಳಗೊಂಡಿರುತ್ತದೆ.
ಈ ಧರಣಿ ಸತ್ಯಾಗ್ರಹದಲ್ಲಿ ಜಾತ್ಯತೀತವಾಗಿ, ಧರ್ಮಾತೀತವಾಗಿ ಎಲ್ಲರೂ ಭಾಗವಹಿಸಬೇಕು,ಸಾರ್ವಜನಿಕರು ಮತ್ತು ಚಿಂತಕರು, ಸಾಹಿತಿಗಳು, ರಾಜಕೀಯ ಕ್ಷೇತ್ರದ ಮುಖಂಡರು,ವಿದ್ಯಾರ್ಥಿಗಳು, ಯುವಜನತೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಧರಣಿ ವೇಳೆ ಮಾದಕ ದ್ರವ್ಯ ಮುಕ್ತ ಮೈಸೂರನ್ನು ರಚಿಸುವ ಪ್ರತಿಜ್ಞೆ ಮಾಡುತ್ತೇವೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಡಾ. ಎಂ, ಲಿಂಗರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಾ ನಟರಾಜ್, ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಪಿ, ಸುಶೀಲ, ಜನರಿಗಾಗಿ ಸೇವಾ ಸಮಿತಿಯ ಅಧ್ಯಕ್ಷ ಮಹೇಶ್ ಕುಮಾರ್, ಕರ್ನಾಟಕ ಬಸವೇಶ್ವರ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ವೀರಶೈವ ಮೂರ್ತಿ ಮತ್ತಿತರರು ಮಾತನಾಡಿದರು.
