ಮೈಸೂರು: ಬೆಂಗಳೂರು ಮಾದರಿಯಲ್ಲಿ ಮೈಸೂರಿನ ರಸ್ತೆ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಸದ್ಯಕ್ಕೆ ಮಾಡದಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.
ಈ ಕುರಿತು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ಅವರು ಮನವಿ ಮಾಡಿದ್ದಾರೆ.
ಬೆಂಗಳೂರಿನ ಪರಿಸ್ಥಿತಿಯಂತೆ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನ ಪರಿಸ್ಥಿತಿ ಇಲ್ಲ. ಮೈಸೂರಿಗೂ ಬೆಂಗಳೂರಿಗೂ ತಾಳೆ ಹಾಕುವುದು ಸರಿಯಲ್ಲ, ಅಲ್ಲಿನ ಜನಸಂಖ್ಯೆಗೂ ಇಲ್ಲಿನ ಜನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿರುವ ಕಾರಣ ರಸ್ತೆ ಬದಿ ವ್ಯಾಪಾರಿಗಳನ್ನ ಸಧ್ಯಕ್ಕೆ ತೆರವು ಮಾಡಬಾರದು ಎಂದು ಕೋರಿದ್ದಾರೆ.
ಮೈಸೂರಿನಲ್ಲಿ ಅನೇಕ ವರ್ಷಗಳಿಂದ ರಸ್ತೆ ಬದಿಗಳಲ್ಲಿ, ಪುಟ್ ಪಾತ್ ಗಳಲ್ಲಿ, ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭ ವಾಗುವುದ ರಿಂದ ಏಕಾಏಕಿ ತೆರವು ಕಾರ್ಯಾಚರಣೆ ಆರಂಭಿಸಿದರೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಪಾದಚಾರಿಗಳಿಗೆ ತೊಂದರೆಯಾಗುವಂತಹ ಪರಿಸ್ಥಿತಿ ಕಡಿಮೆ ಇದೆ. ಬೇಕಿದ್ದರೆ ಪಾದಚಾರಿ ಮಾರ್ಗದಲ್ಲಿ ಅಕ್ರಮ ಕಟ್ಟಡಗಳು ಕಂಡು ಬಂದಲ್ಲಿ ತೆರವುಗೊಳಿಸುವಂತೆ ತೇಜಸ್ವಿ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರು ಮಹಾ ನಗರ ಪಾಲಿಕೆಯ ನೂತನ ಆಯುಕ್ತರಾದ ಎಂ ಕೆ ಸವಿತ ಅವರನ್ನು ಭೇಟಿ ಮಾಡಿ ಮನವಿ ಪತ್ರ ನೀಡುವುದಾಗಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
