ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧೆಡೆ ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಹಾಸ್ಟೆಲ್, ರೈತಸಂಪರ್ಕ ಕೇಂದ್ರಗಳ ಕಾರ್ಯವೈಖರಿಯನ್ನು ಪರಿಶೀಲಿಸಿದ್ದೇನೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಅವರು ತಿಳಿಸಿದರು.
ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ನಾಲ್ವರು ಸಿಬ್ಬಂದಿ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ,ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಿದ್ದಾರೆ ಎಂದು ಅವರು ಹೇಳಿದರು.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಎಚ್. ಕೃಷ್ಣ ಅವರು, ಆಹಾರ ದಾಸ್ತಾನು ವ್ಯತ್ಯಾಸಗಳನ್ನು ನಿರ್ವಹಿಸದಿರುವುದು ಸೇರಿದಂತೆ ಇನ್ನಿತರ ನ್ಯೂನ್ಯತೆಗಳ ಕಾರಣದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಓರ್ವ ಹಾಸ್ಟೆಲ್ ವಾರ್ಡನ್, ಸಮಾಜ ಕಲ್ಯಾಣ ಇಲಾಖೆ ಓರ್ವ ಹಾಸ್ಟೆಲ್ ವಾರ್ಡನ್, ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟ ನಿರ್ವಹಣೆಗೆ ಸಂಬಂಧಿಸಿದಂತೆ ಒಬ್ಬರು ಪೌಷ್ಠಿಕ ಆಹಾರವನ್ನು ಕೆಲ ಫಲಾನುಭವಿಗಳಿಗೆ ವಿತರಿಸದೇ ದಾಖಲು ಪುಸ್ತಕದಲ್ಲಿ ವಿತರಣೆ ಮಾಡಲಾಗಿದೆ ಎಂದು ನಮೂದಿಸಿರುವ ಒಬ್ಬ ಅಂಗನವಾಡಿ ಕಾರ್ಯಕರ್ತೆ ವಿರುದ್ದ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ,ಕಡ್ಡಾಯ ರಜೆಯಂತಹ ಕ್ರಮಗಳಿಗೆ ಅಧಿಕಾರಿಗಳು ಕ್ರಮವಹಿಸಿದ್ದಾರೆ ಎಂದು ತಿಳಿಸಿದರು.
ಮಲ್ಲಯ್ಯನಪುರದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗಿರುವ ಪಡಿತರದಲ್ಲಿ ತೂಕ ವ್ಯತ್ಯಾಸ, ಬಯೋಮೆಟ್ರಿಕ್ ಪಡೆದು ಆಹಾರ ಪದಾರ್ಥ ವಿತರಣೆ ಮಾಡದೇ ತಡವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟಲ್ಗಳಲ್ಲಿ ಮುಖ್ಯವಾಗಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕು. ದಾಸ್ತಾನು ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು. ಮೆನು ಪ್ರಕಾರವೇ ಆಹಾರ ನೀಡಬೇಕು. ತಾಲೂಕು ಕಚೇರಿ ಭೇಟಿ ವೇಳೆ ಆಧಾರ್ ಲಿಂಕ್ ಸಮಸ್ಯೆಯಿಂದ ಹಲವಾರು ಜನರಿಗೆ ಸೌಲಭ್ಯಗಳು ತಲುಪಲು ವಿಳಂಬವಾಗಿರುವುದು ಕಂಡುಬಂದಿದೆ. ಆಧಾರ್ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವಂತೆ ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಭೇಟಿ ಸಮಯದಲ್ಲಿ ಜನರಿಂದ ದೂರುಗಳು ಕಂಡುಬಂದಿವೆ, ರೋಗಿಗಳಿಗೆ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿ ಸಿಗಬೇಕು, ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಲಭ್ಯವಿರಬೇಕು, ಔಷಧಕ್ಕಾಗಿ ರೋಗಿಗಳಿಗೆ ಹೊರಗಡೆ ಚೀಟಿ ಬರೆಯಬಾರದು ಎಂದು ಸೂಚಿಸಲಾಗಿದೆ.
ನ್ಯಾಯಬೆಲೆ ಅಂಗಡಿ ಪರಿಶೀಲನೆ ವೇಳೆ ನಿಗದಿತ ಪ್ರಮಾಣದಲ್ಲಿ ಆಹಾರ ವಿತರಣೆ ಮಾಡುತ್ತಿಲ್ಲದಿರುವುದು ಕಂಡುಬಂದಿದ್ದು, ಆಹಾರ ವಿತರಣೆ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಬರದಂತೆ ನೋಡಿಕೊಳ್ಳಲು ಆದೇಶಿಸಲಾಗಿದೆ. ರೈತ ಸಂಪರ್ಕ ಕೇಂದ್ರ ಭೇಟಿ ವೇಳೆ ಸೌಲಭ್ಯ ಪಡೆದ ಫಲಾನುಭವಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ತಿಳಿಯಲಾಗಿದೆ ಎಂದು ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಕೆ.ಎಸ್. ವಿಜಯಲಕ್ಷ್ಮೀ, ಎ. ರೋಹಿಣಿಪ್ರಿಯ, ಮಾರುತಿ ದೊಡ್ಡಣ್ಣನವರ್, ಆಹಾರ ಇಲಾಖೆಯ ಉಪನಿರ್ದೇಶಕರಾದ ವಸುಂಧರಾ ಹೆಗಡೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
