ಹುಣಸೂರು: ಹುಣಸೂರಿನ ರತ್ನಪುರಿ ದರ್ಗಾದಲ್ಲಿ ಇತಿಹಾಸ, ಪುರಾಣ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಕಳೆಗಟ್ಟಿದೆ.
ಈಗಾಗಲೇ ರಾಸುಗಳು ಹುಣಸೂರಿನ ಸುತ್ತಮುತ್ತ ಪ್ರದೇಶಗಳಿಂದ ಬಂದು ಬೀಡುಬಿಟ್ಟಿವೆ.
ಇಡೀ ರತ್ನಪುರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಹಿಂದೆ ಮೈಸೂರು ಮಹಾರಾಜರು ಸುತ್ತಾಟಕ್ಕೆ ಬಂದಾಗೆಲ್ಲ ಇದೇ ಆಂಜನೇಯ ಸ್ವಾಮಿ ಇರುವ ಜಾಗದಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ದೇವರ ಆಶೀರ್ವಾದ ಪಡೆದು ಹೋಗುತ್ತಿದ್ದರೆಂದು ಊರಿನ ಹಿರಿಯರು ಹೇಳುತ್ತಾರೆ.
ಅಲ್ಲದೆ ಮೈಸೂರು ಅರಮನೆಯಿಂದ ಈ ದೇವಾಲಯದ ವರೆಗೆ ಒಂದು ಸುರಂಗ ಮಾರ್ಗ ಕೂಡ ಇತ್ತೆಂದು ಹಿರಿಯರು ಹೇಳುತ್ತಾರೆ. ಈ ಕ್ಷೇತ್ರ ನಿಜಕ್ಕೂ ಒಂದು ಪವಿತ್ರ ತಾಣವಾಗಿದೆ.
ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವನ್ನು ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ರತ್ನಪುರಿ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಮುಖಂಡರು ಸೇರಿ ಅದ್ದೂರಿಯಾಗಿ ಮಾಡಿಕೊಂಡು ಬಂದಿದ್ದಾರೆ.
ಇದುವರೆಗೂ ಒಂದು ಸಣ್ಣ ಅಹಿತಕರ ಘಟನೆ ಕೂಡ ಇಲ್ಲಿ ನಡೆಯದಿರುವುದು ನಿಜಕ್ಕೂ ವಿಶೇಷ. ಎಲ್ಲರೂ ಸಹೋದರರಂತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದಾದ ನಂತರ ಭಾನುವಾರ ಮುಸ್ಲಿಮರ ಉರುಸ್ ಕೂಡಾ ಇಲ್ಲೇ ನಡೆಯುವುದು ವಿಶೇಷವೇ ಸರಿ.ಎಲ್ಲಾ ಕಾರ್ಯಕ್ರಮಗಳಲ್ಲೂ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳುತ್ತಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆಯಿಂದ ಕುಸ್ತಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ, ರಾಸುಗಳ ಸ್ಪರ್ಧೆ ಹೀಗೆ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ರಾಜ್ಯಾಧ್ಯಕ್ಷ ಶಿವಣ್ಣ ಮತ್ತು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಶುಕ್ರವಾರ ಸಂಜೆ 15 ಉತ್ತಮ ರಾಸುಗಳ ಜೋಡಿಗೆ ಪಕ್ಷದ ವತಿಯಿಂದ ಬಹುಮಾನವನ್ನು ನೀಡಲಾಗುತ್ತದೆ ಎಂದು ಚೆಲುವರಾಜು ಮಾಹಿತಿ ನೀಡಿದ್ದಾರೆ.
ಇದೆ ಶನಿವಾರ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.ಅಂದು ಸಂಜೆ ನಮ್ಮ ಪಾರ್ಟಿ ವತಿಯಿಂದ ಅನ್ನದಾನ ಕೂಡಾ ಹಮ್ಮಿಕೊಂಡಿದ್ದೇವೆ ಎಂದು ಚೆಲುವರಾಜು ತಿಳಿಸಿದ್ದಾರೆ.
ಜಾತ್ರೆಯು ಜಾತ್ರಾ ಉತ್ಸವದ ಅಧ್ಯಕ್ಷರಾದ ಪ್ರಭು, ಪ್ರಸನ್ನ,ಪುಟ್ಟ ಸ್ವಾಮಿ, ಅಜ್ಗರ್ ರವಿ,ಹರಿಹರನ್ ಸ್ವಾಮಿ ಅಲ್ಲದೆ ಹುಣಸೂರಿನ ಹಾಲಿ, ಮಾಜಿ ಶಾಸಕರು ಮತ್ತು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ಅನೇಕ ಮುಖಂಡರ ಮುಂದಾಳತ್ವದಲ್ಲಿ ನೆರವೇರಲಿದೆ.
ಹುಣಸೂರು ತಹಸಿಲ್ದಾರ್ ಮತ್ತು ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಿ ಸಹಕಾರ ನೀಡಿದ್ದಾರೆ.
