ಬೆಳ್ತಂಗಡಿ: ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ನವಜೋಡಿಗಳು ಹಸೆಮಣೆ ಏರಿದರು.
ಬುಧವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ಮೂಗುತಿ ಮತ್ತು ರವಿಕೆ ಕಣ ವಿತರಿಸಿದರು.
ಸಂಜೆ 5 ಗಂಟೆಗೆ ವಧೂ-ವರರನ್ನು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಯಿಂದ ಅಮೃತವರ್ಷಿಣಿ ಸಭಾಭವನಕ್ಕೆ ಕರೆತರಲಾಯಿತು.
ಬಳಿಕ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು.
ಗಂಟೆ 6.40ರ ಗೋಧೂಳಿ ಲಗ್ನದಲ್ಲಿ ವೇದಘೋಷ, ಮಂಗಳವಾದ್ಯ, ಹಾರ ವಿನಿಮಯ, ಮಂತ್ರಾಕ್ಷತೆಯೊಂದಿಗೆ ವಧುವಿಗೆ ಮಂಗಳಸೂತ್ರ ಧಾರಣೆ ಮಾಡುವ ಮೂಲಕ ಉಚಿತ ಸಾಮೂಹಿಕ ವಿವಾಹ ನೆರವೇರಿತು.
ಸುಶ್ರಾವ್ಯ ಶೋಭಾನೆ ಹಾಡುಗಳೊಂದಿಗೆ ವಧೂ-ವರರಿಗೆ ಆರತಿ ಹಾಗೂ ಮಂಗಲದ್ರವ್ಯಗಳನ್ನು ವಿತರಣೆ ಮಾಡಲಾಯಿತು. ದಾಂಪತ್ಯ ದೀಕ್ಷೆಯ ಬಳಿಕ ನೂತನ ದಂಪತಿಗಳಿಗೆ ಧರ್ಮಸ್ಥಳದ ವತಿಯಿಂದ ಉಡುಗೊರೆ ನೀಡಿ ಶುಭ ಹಾರೈಸಲಾಯಿತು.
ಬಳಿಕ ನೂತನ ದಂಪತಿಗಳು ದೇವರ ದರ್ಶನ ಮಾಡಿದರು.
ಈ ಸಮಾರಂಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನೂತನ ದಂಪತಿಗಳು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸದೊಂದಿಗೆ ಹೊಂದಾಣಿಕೆಯಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿ ಆಶೀರ್ವದಿಸಿದರು.
ಧರ್ಮಸ್ಥಳದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಸರ್ಕಾರ ಹಾಗೂ ಇತರ ಮಠ-ಮಂದಿರಗಳು ಮಾದರಿಯಾಗಿ ಸ್ವೀಕರಿಸಿ ಅನುಸರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಬೇರೆ ಕಡೆಗಳಲ್ಲಿ ನಡೆಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಇನ್ನು ಮುಂದೆ ಧರ್ಮಸ್ಥಳದಿಂದ ಮಂಗಳಸೂತ್ರ ಕೊಡಲಾಗುವುದಿಲ್ಲ ಎಂದು ಹೆಗ್ಗಡೆಯವರು ಇದೇ ವೇಳೆ ಪ್ರಕಟಿಸಿದರು.
ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮತ್ತಿತರರು ನೂತನ ಜೋಡಿಗಳಿಗೆ ಶುಭ ಹಾರೈಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶರ್ಮಿಳಾ ಮತ್ತಿತರ ಗಣ್ಯರು ಹಾಜರಿದ್ದರು.
