ಕೊಳ್ಳೇಗಾಲ: ಅಡಿಗೆ ಸಿಬ್ಬಂದಿ ಮಕ್ಕಳಿಗೆ ಮಮತೆಯಿಂದ ಊಟ ಬಡಿಸುವಂತೆ ಹನೂರು ಮತ್ತು ಕೊಳ್ಳೇಗಾಲ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಆರ್ ನಂಜುಂಡಯ್ಯ ಅವರು ಸಲಹೆ ನೀಡಿದರು.
ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಬೌದ್ಧಿಕ ಮಟ್ಟ ಪರಿಶೀಲಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ನರೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಿನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ತೆಳ್ಳನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊತ್ತನೂರು ಜಿ.ವಿ ಗೌಡ ಅನುದಾನಿತ ಪ್ರೌಢಶಾಲೆ
ಹನೂರು ತಾಲ್ಲೂಕಿನ ಬಂಡಳ್ಳಿ ಜೆ ಎಸ್ ಎಸ್ ಪ್ರೌಢಶಾಲೆ ಹಾಗೂ ಪಟ್ಟಣದ ಕ್ರಿಸ್ತರಾಜ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಂಜುಂಡಯ್ಯ ನವರು ಭೇಟಿ ನೀಡಿದರು
ಈ ವೇಳೆ ವಿವಿಧ ಶಾಲೆಗಳಲ್ಲಿ ಉತ್ತಮವಾಗಿ ಬಿಸಿಯೂಟ ತಯಾರಿಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವು ಕಡೆ ತರಗತಿಗಳಿಗೆ ಭೇಟಿ ನೀಡಿ ಮಕ್ಕಳಿಂದ ಬಿಸಿಯೂಟದ ಬಗ್ಗೆ ಮಾಹಿತಿ ಪಡೆದು ಕೊಂಡ ನಂಜುಂಡಯ್ಯರವರು ಸರ್ಕಾರದ ಈ ಮಹತ್ವದ ಯೋಜನೆಯನ್ನು ಸದುಪಯೋಗಪಡಿಸಿ ಕೊಂಡು ಉತ್ತಮ ಕಲಿಕೆಗೆ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊತ್ತನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆ ಊಟ ಮಾಡಿದ ನಂಜುಂಡಯ್ಯ ಅವರು. ಮೊದಲು ಆಹಾರಧಾನ್ಯಗಳನ್ನು ಹಾಳಾಗದಂತೆ ಸಂಸ್ಕರಿಸಿ, ಸಂಗ್ರಹಿಸಿಟ್ಟು ಕೊಳ್ಳಬೇಕು, ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ಶುಚಿ, ರುಚಿಯಾಗಿ ನೀಡಬೇಕು,ಉತ್ತಮ ಗುಣಮಟ್ಟದ ಆಹಾರ ನೀಡಿ ಮಕ್ಕಳ ಉತ್ತಮ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡಿ ಎಂದು ಮುಖ್ಯ ಶಿಕ್ಷಕರುಗಳಿಗೆ ಸೂಚಿಸಿದರು.
