ಮೈಸೂರು: ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ನಗರದ ಹಳೇ ಸಂತೆಪೇಟೆಯಲ್ಲಿ 35ಕ್ಕೂ ಹೆಚ್ಚು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಿಕಾ ವಿತರಕಿ ರಮಾದೇವಿ ಅವರನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜಕ್ಕೆ ದಿನನಿತ್ಯದ ಸುದ್ದಿಗಳನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಳೆ, ಗಾಳಿ, ಬಿಸಿಲು ಎನ್ನದೆ ಹಲವು ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ರಮಾದೇವಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ, ಪತ್ರಿಕಾ ವಿತರಕರು ಮಾಧ್ಯಮ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಶ್ರಮ ಮತ್ತು ಸಮರ್ಪಣೆಯನ್ನು ಸಮಾಜ ಸದಾ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ. ರಾಘವೇಂದ್ರ, ಎಸ್.ಎನ್. ರಾಜೇಶ್, ನವೀನ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ರಾಕೇಶ್, ದುರ್ಗಾ ಪ್ರಸಾದ್, ಹರೀಶ್ ನಾಯ್ಡು ಸೇರಿದಂತೆ ಹಲವರು ಉಪಸ್ಥಿತರಿದ್ದರು
