ಬೆಂಗಳೂರು: ಅತ್ತು-ಕರೆದು,ಕಾಡಿ-ಬೇಡಿ, ದೆಹಲಿಯ ಹೈಕಮಾಂಡ್ ಬಾಗಿಲು ಕಾದು ಕೊನೆಗೂ ಮುಖ್ಯಮಂತ್ರಿ ಕುರ್ಚಿಯ ಕನಸನ್ನು ನನಸಾಗಿಸಿಕೊಂಡ ಡಿ.ಕೆ. ಶಿವಕುಮಾರ್ ಅವರ ಸರ್ಕಾರಕ್ಕೆ ಇಂದಿಗೆ ಒಂದು ತಿಂಗಳು ತುಂಬಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ರಾಜಕೀಯ ಕನಸೇನೋ ನನಸಾಗಿದೆ. ಆದರೆ ಕೇವಲ ಒಂದು ತಿಂಗಳಲ್ಲೇ ಕೋಟ್ಯಂತರ ಕನ್ನಡಿಗರ ಕನಸುಗಳು ಭ್ರಮನಿರಸನವಾಗಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಪ್ರಗತಿಶೀಲ ರಾಜ್ಯವಾಗಿದ್ದ ನಮ್ಮ ಹೆಮ್ಮೆಯ ಕರ್ನಾಟಕದ ಯಶಸ್ಸಿಗೆ ಒಕ್ಕರಿಸಿದ ಅತಿ ದೊಡ್ಡ ‘ಡಿಸಾಸ್ಟರ್’ ಅಂದರೆ ಅದು ನಿಮ್ಮ ಕಾಂಗ್ರೆಸ್ ಸರ್ಕಾರ ಎಂದು ಟ್ವೀಟ್ ಮಾಡಿ ಅಶೋಕ್ ಜರಿದಿದ್ದಾರೆ.
ರಸಗೊಬ್ಬರಕ್ಕಾಗಿ ರೈತರು ಸಾಲಿನಲ್ಲಿ ಚಪ್ಪಲಿ ಇಟ್ಟು ದಿನಗಟ್ಟಲೆ ಕಾಯಬೇಕಾದ ದುಸ್ಥಿತಿ, ನೀರಿಗಾಗಿ ಹೋರಾಟ, ಬರದ ಭೀತಿ, ಭೂಸ್ವಾಧೀನದ ಆತಂಕ, ಅನ್ನದಾತ ನಿಮ್ಮ ಆಡಳಿತದಲ್ಲಿ ತನ್ನದೇ ಜಮೀನಿನಲ್ಲಿ ಭಿಕ್ಷುಕನಂತಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಭರವಸೆಯಾಗಿಯೇ ಉಳಿದ ನೇಮಕಾತಿಯ ಆಶ್ವಾಸನೆ, ಹೊಸ ಉದ್ಯೋಗದಲ್ಲಿ ಶೂನ್ಯ ಸಾಧನೆ,
ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಪರಿಷ್ಕರಣೆಯ ಹೆಸರಿನಲ್ಲಿ ಸ್ವಾಭಿಮಾನಿ ಗೃಹಲಕ್ಷ್ಮಿಯರ ಮೇಲೆ ಅನುಮಾನ,
ಬೆಲೆ ಏರಿಕೆ, ತೆರಿಗೆಗಳ ಹೊರೆ, ದೈನಂದಿನ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಗ್ಯಾರೆಂಟಿ ಸರ್ಕಾರವಲ್ಲ, ಲೂಟಿ ಸರ್ಕಾರ ಎಂದು ಅಶೋಕ ಕುಟುಕಿದ್ದಾರೆ.
ಅನಿಶ್ಚಿತ ಆಡಳಿತ ಮತ್ತು ಕಮಿಷನ್ ದಂಧೆಗೆ ಹೆದರಿ ಹೂಡಿಕೆದಾರರು ನೆರೆರಾಜ್ಯಗಳಿಗೆ ಪಲಾಯನ ಮಾಡುತ್ತಿದ್ದಾರೆ.
ಟ್ರಾಫಿಕ್ ನರಕ, ಗುಂಡಿ ಬಿದ್ದ ರಸ್ತೆಗಳು, ಯೋಜನಾ ರಹಿತ ಅವ್ಯವಸ್ಥೆ, ಪರಿಹಾರದ ಸುಳಿವೇ ಕಾಣುತ್ತಿಲ್ಲ,
ಜನರಿಗೆ ಎಲ್ಲೂ ಆಡಳಿತ ಕಾಣುತ್ತಿಲ್ಲ ಕಾಣುತ್ತಿರುವುದು ಒಂದೇ – ಸುಳ್ಳು ಪ್ರಚಾರ ಮತ್ತು ಭ್ರಷ್ಟಾಚಾರ
ಕೇವಲ 30 ದಿನಗಳ ಟ್ರೈಲರ್ನಲ್ಲೇ ಇಡೀ ರಾಜ್ಯದ ಕನಸನ್ನು ನುಚ್ಚು ನೂರು ಮಾಡಿರುವ ನಿಮ್ಮ ಸರ್ಕಾರ, ಇನ್ನು ಎರಡು ವರ್ಷ ಮುಂದುವರಿದರೆ ಕರ್ನಾಟಕದ ಸ್ಥಿತಿ ಏನಾಗಬಹುದು ಎಂಬ ಆತಂಕ ಪ್ರತಿಯೊಬ್ಬ ಕನ್ನಡಿಗನಲ್ಲಿದೆ ಎಂದು ಪ್ರತಿಪಕ್ಷ ನಾಯಕರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳೇ, ನಿಮ್ಮ ಕುರ್ಚಿಯ ಕನಸು ನನಸುಗೊಂಡಿದೆ, ಆದರೆ ಕರ್ನಾಟಕದ ಜನತೆಯ ಕನಸುಗಳು, ಆಶೋತ್ತರಗಳು, ನಿರೀಕ್ಷೆಗಳು ಮಾತ್ರ ಸಂಪೂರ್ಣವಾಗಿ ಭ್ರಮನಿರಸನಗೊಂಡಿವೆ ಎಂದು ಅಶೋಕ್ ಟೀಕಿಸಿದ್ದಾರೆ.
