ಮೈಸೂರು: ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ, ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು ಬದಲಿಸಲು ಅವಕಾಶವಿಲ್ಲ ಎಂದು ಇದನ್ನು ಎಲ್ಲರೂ ತಿಳಿಯಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ದಾರಿ ಫೌಂಡೇಷನ್ ವತಿಯಿಂದ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ’ ವಿಷಯ ಕುರಿತ ಮುಕ್ತ ಸಂವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಗೆಲುವಿಗೆ ಚಲಾಯಿತ ಮತಗಳ ಪೈಕಿ ಶೇ.50ರಷ್ಟನ್ನು ನಿಗದಿಪಡಿಸಬೇಕು. ಈಗ ಆಯ್ಕೆಯಾದ ಬಳಿಕ 5 ವರ್ಷಗಳು ಚುನಾಯಿತ ಪ್ರತಿನಿಧಿಗಳು ಏನು ಮಾಡಿದರೂ ಕೇಳುವಂತಿಲ್ಲ ಎಂಬಂತಿದೆ, ಇದು ಹೋಗಬೇಕು ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳು ಮತದಾರರಿಗೆ ಉತ್ತರದಾಯಿಗಳಾಗಿರಬೇಕು. ವಾಪಸ್ ಕರೆಸಿಕೊಳ್ಳುವ ಅಧಿಕಾರ ಇದ್ದಲ್ಲಿ ಭಯದಿಂದ ಜನರ ಕೆಲಸ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕೇ ಹೊರತು ಪ್ರಜೆಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಈಗ ಶೇ.50ರಷ್ಟು ಮತದಾನ ಆಗದಿದ್ದರೂ ಚಲಾಯಿತ ಮತಗಳಲ್ಲಿ ಶೇ.50 ಮತಗಳನ್ನು ಪಡೆಯದಿದ್ದರೂ ಹೆಚ್ಚು ಮತ ಪಡೆದವರನ್ನು ಚುನಾಯಿತ ಎಂದು ಘೋಷಿಸಲಾಗುತ್ತಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ ಇದು ತಪ್ಪಬೇಕು. ಗೆಲುವಿಗೆ ಚಲಾಯಿತ ಮತಗಳಲ್ಲಿ ಶೇ.50ರಷ್ಟು ನಿಗದಿಪಡಿಸಬೇಕು ಎಂದು ಮುಖ್ಯ ಮಂತ್ರಿ ಚಂದ್ರು ಒತ್ತಾಯಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ನಟರಾಜ್ ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ, ಕಾರ್ಯದರ್ಶಿ ತಗಡೂರು ವೀರೇಶ್ಕುಮಾರ್ ಮಹಾಮನೆ, ಸಂಚಾಲಕ ಪ್ರಭಾಕರ್, ಐಕ್ಯೂಎಸಿ ಸಂಚಾಲಕ ಡಾ.ಎಸ್.ಮುತ್ತುರಾಜ, ಖಜಾಂಚಿ ರಾಘವೇಂದ್ರ, ಮಲ್ಲಣ್ಣ, ತೋಂಟೇಶ್, ಐಕ್ಯತಾ, ಮೈಸೂರು ಎಂ.ಮಹಾಲಿಂಗ, ವಿದ್ಯಾರ್ಥಿನಿ ಅಧ್ಯಕ್ಷರಾದ ಎಸ್.ಜೆ.ಸಿಂಚನಾ, ಕಾರ್ಯದರ್ಶಿ ಸೈಯದಾ ನೂರೇನ್, ತನುಶ್ರೀ, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.
